ಮಂಜೇಶ್ವರ: ಫೆಂಗಲ್ ಚಂಡ ಮಾರುತದ ಪ್ರಭಾವದಿಂದಾಗಿ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ಭಾರೀ ಸಿಡಿಲು ಮಿಂಚಿನೊಂದಿಗೆ ಹಠಾತ್ ಸುರಿದ ಅತೀ ತೀವ್ರ ಮಳೆಯಿಂದ ನೂತನವಾಗಿ ನಿರ್ಮಿಸಲಾದ ಷಟ್ಪಥ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ಹರಿದು ಹೋಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಲ್ಲೇ ಕಟ್ಟಿ ನಿಂತ ನೀರಿನಿಂದ ವಾಹನ ಸವಾರರಿಗೆ ಸಮುದ್ರಕ್ಕಿಳಿದ ಅನುಭವವಾಗಿದೆ.
ಕುಂಜತ್ತೂರು, ಮಂಜೇಳ್ಳರ, ಪೊಸೋಟು, ಉಪ್ಪಳ ಕುಂಬಳೆ ಸೇರಿದಂತೆ ಕಾಸರಗೋಡು ಜಿಲ್ಲೆಯ ಬಹುತೇಕ ರಸ್ತೆಗಳು ಜಲಾವೃತಗೊಂಡಿದೆ. ಮಂಜೇಶ್ವರ, ಉಪ್ಪಳ, ಕುಂಬಳೆಗಳಲ್ಲಿ ಹಲವಾರು ಮನೆಗಳು ಕೂಡಾ ಜಲಾವೃತವಾಗಿದೆ. ಜಿಲ್ಲೆಯಾಧ್ಯಂತ ಅಸ್ತವ್ಯಸ್ತದ ಒಂದು ವಾತಾವರಣ ಸೃಷ್ಟಿಯಾಗಿದೆ. ಜೊತೆಗೆ ಕೇರಳ ಕರಾವಳಿಯಲ್ಲಿ ಅಪಾಯ ತಂದೊಡ್ಡುವ ಒಂದು ಭಯದ ವಾತಾವರಣ ಸೃಷ್ಟಿಯಾಗಿದೆ.
ಪೊಸೋಟು ಸೇತುವೆ ಸಮೀಪದ ಸಾಬಿರ್ ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ಉಪಕರಣಗಳೆಲ್ಲಾ ನಾಶಗೊಂಡಿದೆ. ಮನೆಯ ಹಲವು ಭಾಗಗಳ ಗೋಡೆಗಳು ಸಿಡಿಲಿನ ಆಘಾತಕ್ಕೆ ಭಾಗವಾಗಿದೆ. ಸುಮಾರು ಎರಡು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಉಪ್ಪಳ ಗೇಟ್ ಸಮೀಪದ ಎಂ ಪಿ ಸಿದ್ದೀಖ್, ಫಾರೂಕ್, ಅಂದು ಹಾಜಿ, ಅಬು ಹಾಜಿ, ಸಕರಿಯ, ಮೋನು ಅರಬಿ ಎಂಬಿವರ ಮನೆಗಳು ಜಲಾವೃತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಹರಿದು ಬಂದ ನೀರಿನಿಂದ ಮನೆಗಳು ಜಲಾವೃತ ಗೊಂಡಿದೆ.
ಉದ್ಯಾವರ, ಮಂಜೇಶ್ವರದ ಹಲವೆಡೆ ಹಲವು ಮನೆಗಳು ಜಲಾವೃತ ಗೊಂಡಿದೆ. ಶಿರಿಯಾ ರಸ್ತೆ ಈಜು ಕೊಳವಾಗಿ ಮಾರ್ಪಾಟಾಗಿದೆ.
ಹಲವೆಡೆ ಅಪಾರ ಹಾನಿಗಳು ಉಂಟಾದ ಬಗ್ಗೆ ವರದಿಯಾಗಿದೆ. ಕುಂಬಳೆ ಶಿರಿಯಾ ಸೇತುವೆ ಬಳಿ ಹೆದ್ದಾರಿಯಲ್ಲಿ ವಾಹನಗಳಿಗೆ ಸಂಚಾರ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಆರಂಭದಲ್ಲೇ ಹಲವು ಸಂಶಯಗಳು ಇದೀಗ ನಿಜವಾಗುತ್ತಿದೆ. ನಮ್ಮ ಜಿಲ್ಲೆಯ ವರ್ಚಸ್ಸನ್ನು ಹೆಚ್ಚಿಸಬಹುದೆಂಬ ಷಟ್ಪಥ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದ ಇಂದು ನಾಗರೀಕರು ಸಂಕಷ್ಟವನ್ನು ಎದುರಿಸದೇಕಾಗಿದೆ.
ವಿದ್ಯುತ್ ಮೊಟಕುಗೊಂಡು ಎಲ್ಲೆಡೆ ಕತ್ತಲೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿಗಿತ್ತು. ಈಗಲೂ ಹಲವಡೆ ವಿದ್ಯುತ್ ಕಣ್ಣು ಮುಚ್ಚಾಲೆಯಾಡುತ್ತಿದೆ.
ಇನ್ನೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದಾಗಿ ಕಾಸರಗೋಡು, ಕಣ್ಣೂರು, ವಯನಾಡ್, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಅಲ್ಲದೆ ಕಾಸರಗೋಡು, ಕಣ್ಣೂರು, ವಯನಾಡ್, ಇಡುಕ್ಕಿ, ಕೋಟ್ಟಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ರಜೆ ಘೋಷಿಸಲಾಗಿದೆ. ಆದರೆ ಪೂರ್ವನಿಗದಿಯಾಗಿರುವ ಪರೀಕ್ಷೆಗಳಿಗೆ ರಜೆ ಅನ್ವಯಗೊಳಿಸಲಾಗಿಲ್ಲ.