ಕುಂಬಳೆ: ಯಕ್ಷಗಾನದಲ್ಲಿ ಅವರು ಕೊಡುತ್ತಿದ್ದ ಪಾತ್ರ ಗೌರವ ಹಾಗೂ ಸರಳ ಸಜ್ಜನಿಗೆ ಕುಂಬಳೆ ಶ್ರೀಧರ ರಾವ್ ಅವರ ವ್ಯಕ್ತಿತ್ವದ ವಿಶಿಷ್ಟತೆಯಾಗಿತ್ತು. ಸ್ಮøತಿಯೊಂದಿಗೆ ಅವರ ಬಗೆಗಿನ ಕೃತಿ ಹೊರಬಂದಿರುವುದು ಶ್ಲಾಘನೀಯ ಮತ್ತು ಇಂತಹ ಚಟುವಟಿಕೆಗಳು ಮುಂದಿನ ತಲೆಮಾರಿಗೆ ಪರಿಚಯಾತ್ಮಕವಾಗಿರುತ್ತದೆ ಎಂದು ಶ್ರೀಮದ್.ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಯಕ್ಷಗಾನದ ಹಿರಿಯ ಕಲಾವಿದ, ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ಐದು ದಶಕಕ್ಕೂ ಹೆಚ್ಚುಕಾಲ ತಿರುಗಾಟ ನಡೆಸಿದ ಕುಂಬಳೆ ಶ್ರೀಧರ ರಾವ್ ಅವರ ನೆನಪಿನೊಂದಿಗೆ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯ ಪರಿಸರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕುಂಬಳೆ ಶ್ರೀಧರ ರಾವ್ ಸ್ಮøತಿ-ಕೃತಿಯಲ್ಲಿ ‘ಕಲಾ ಶ್ರೀಧರ’ ಕೃತಿಯನ್ನು ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಗಳ ಜೊತೆಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಧರ್ಮಸ್ಥಳ ಎಸ್.ಡಿ.ಎಂ. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ, ಸುಧೀರ್ಘ ಕಾಲ ಶ್ರೀಧರ್ಮಸ್ಥಳ ಮೇಳದಲ್ಲಿ ವ್ಯವಸಾಯಿಗಳಾಗಿದ್ದ ದಿ.ಶ್ರೀಧರ ರಾವ್ ಸರಳ ಮತ್ತು ಮೃದು ಸ್ವಭಾವಗಳಿಂದ ಎಲ್ಲರ ಜೊತೆಗೆ ಒಂದಾಗಿದ್ದವರು. ತಮಗೆ ನೀಡಿದ ಪಾತ್ರಗಳನ್ನು ಸೂಕ್ಷ್ಮವಾಗಿ, ಅಚ್ಚುಕಟ್ಟಿನಿಂದ ನಿರ್ವಹಿಸಿದ್ದರು. ಪೂಜ್ಯ ಮಾತೃಶ್ರೀಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರು ಎಂದು ನೆನಪಿಸಿದರು.
ಹಿರಿಯ ವಿದ್ವಾಂಸ, ಅರ್ಥದಾರಿ ಡಾ.ಎಂ.ಪ್ರಭಾಕರ ಜೋಶಿ 'ಶ್ರೀಧರ ಸ್ಮøತಿ'ಗೈದು ಮಾತನಾಡಿ ಪಾತೀಸುಬ್ಬನ ನೆಲದಿಂದ ಬೆಳೆದ ಶ್ರೀಧರ ರಾಯರು ಹಂತಾನುಹಂತವಾಗಿ ಅಸಾಮಾನ್ಯ ಪಾತ್ರ ನಿರ್ವಹಣೆಯ ಮೂಲಕ ಗಮನ ಸೆಳೆದವರು. ಕುಂಬಳೆಯಲ್ಲಿ ಯಕ್ಷಗಾನ ಕಲಾವಿದರಿಗಾಗಿ ಪಾರ್ತಿಸುಬ್ಬನ ಹೆಸರಲ್ಲಿ ಇನ್ನಾದರೂ ಸ್ಮಾರಕ ನಿರ್ಮಿಸುವ ಸಂಕಲ್ಪ ಸಾಕಾರಗೊಳ್ಳಲಿ ಎಂದವರು ತಿಳಿಸಿದರು.ಶ್ರೀಧರ ರಾಯರ ವೃತ್ತಿಪರತೆ, ತಜ್ಞತೆ, ಸರಳತೆ ಎಲ್ಲರಿಗೂ ಮಾರ್ಗದರ್ಶಿ, ಆ ಶ್ರೀಧರ ಪ್ರಜ್ಞೆ ಎಲ್ಲರಲ್ಲೂ ಇರಲಿ ಎಂದವರು ವಿಶ್ಲೇಶಿಸಿದರು.
ಶ್ರೀಧರ ಸ್ಮøತಿ-ಕೃತಿಯ ಸಮಿತಿ ಅಧ್ಯಕ್ಷ ಮೋಹನ ದಾಸ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಧರ ರಾಯರ ಧರ್ಮಪತ್ನಿ ಸುಲೋಚನ ಉಪಸ್ಥಿತರಿದ್ದರು. ಕಲಾ ಶ್ರೀಧರ ಕೃತಿ ಸಂಪಾದಕ, ಪತ್ರಕರ್ತ, ಕಲಾವಿದ ನಾ.ಕಾರಂತ ಪೆರಾಜೆ ಕೃತಿಯ ಬಗ್ಗೆ ಮಾತನಾಡಿದರು. ಶ್ರೀಧರ ರಾವ್ ಅವರ ಪುತ್ರರಾದ ಗಣೇಶ್ ಪ್ರಸಾದ್ ಕುಂಬಳೆ, ದೇವೀಪ್ರಸಾದ್ ಕುಂಬಳೆ ಉಪಸ್ಥಿತರಿದ್ದರು. ನಾ.ಕಾರಂತರನ್ನು ಈ ಸಂದರ್ಭ ಗೌರವಿಸಲಾಯಿತು.
ಬಳಿಕ ಬಳಿಕ ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ, ನಾರಾಯಣ ಮಂಗಲ, ಕುಂಬಳೆ; ಶ್ರೀ ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘ, ಶೇಡಿಕಾವು, ಕುಂಬಳೆ, ಕುಂಬಳೆ ಶ್ರೀಧರ ರಾವ್ ಅಭಿಮಾನಿಗಳು ಆಯೋಜನೆಯಲ್ಲಿ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀಧಾಮ, ಮಾಣಿಲ ಇವರಿಂದ ಡಾ.ಸತೀಶ ಪುಣಿಂಚತ್ತಾಯ, ಪೆರ್ಲ ಇವರ ಸಂಯೋಜನೆಯಲ್ಲಿ 'ಕಂಸವಧೆ' ಬಯಲಾಟ ಪ್ರದರ್ಶನಗೊಂಡಿತು.
ಪೂರ್ವಾಹ್ನ 9ಕ್ಕೆ ಶ್ರೀ ಕಣಿಪುರ ಕ್ಷೇತ್ರದ ಪ್ರಧಾನ ಅರ್ಚಕ ವೇ.ಮೂ. ಮಾಧವ ಅಡಿಗ, ಸಾಮಾಜಿಕ ಸೇವಾ ಕಾರ್ಯಕರ್ತ ಹಾಗೂ ಕಲಾಪೋಷಕ ಮಂಜುನಾಥ ಆಳ್ವ ಮಡ್ವ, ಧರ್ಮಸ್ಥಳ ಮೇಳದ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಕಲಾರತ್ನ ಶಂ.ನಾ. ಅಡಿಗ ಇವರ ಉಪಸ್ಥಿತಿಯಲ್ಲಿ 'ಶ್ರೀಧರ ಸ್ಮೃತಿ' ಕಾರ್ಯಕ್ರಮ ಉದ್ಘಾಟನೆಗೊಂಡಿತು.
9.30ರಿಂದ ಕುಂಬಳೆ ಶ್ರೀಧರ ರಾವ್ ಅವರ ಪ್ರಧಾನ ಪಾತ್ರಗಳ ನೆನವರಿಕೆಯ 'ಸಂವಾದದ ತಾಳಮದ್ದಳೆ' ಹಾಗೂ 'ಕೃಷ್ಣ ಸಂಧಾನ'' ಆಖ್ಯಾನದ ತಾಳಮದ್ದಳೆ ಜರಗಿತು. ದಿನೇಶ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯ (ಭಾಗವತರು), ಲಕ್ಷ್ಮೀಶ ಅಮ್ಮಣ್ಣಾಯ, ಪಿ.ಜಿ.ಜಗನ್ನಿವಾಸ ರಾವ್, ರಾಮಮೂರ್ತಿ ಕುದ್ರೆಕೂಡ್ಲು, ಲವಕುಮಾರ್ ಐಲ (ಮದ್ದಳೆ - ಚೆಂಡೆ); ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಆಶೋಕ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಶಂಭು ಶರ್ಮ, ಎಂ.ಕೆ.ರಮೇಶ ಆಚಾರ್ಯ, ವಸಂತ ಗೌಡ ಕಾಯರ್ತಡ್ಕ, ಗೋಪಾಲ ನಾಯಕ್ ಸೂರಂಬೈಲು, ದಿವಾಕರ ಆಚಾರ್ಯ ಗೇರುಕಟ್ಟೆ, ಅಶೋಕ್ ಕುಂಬ್ಳೆ (ಅರ್ಥದಾರಿಗಳಾಗಿ ಪಾತ್ರ ನಿರ್ವಹಿಸಿದರು.