ಕೊಚ್ಚಿ : ಎನ್‌ಸಿಸಿ ಕ್ಯಾಂಪ್ ವೇಳೆ ಇಬ್ಬರು ಸೇನಾ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ ಇಬ್ಬರನ್ನು ಕೊಚ್ಚಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತರನ್ನು ಕೊಚ್ಚಿಯ ನಿಶಾದ್ ಮತ್ತು ನವಾಜ್ ಎಂದು ಗುರುತಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನೂ ಜೈಲಿಗೆ ಕಳುಹಿಸಿದ್ದಾರೆ.
ಡಿಸೆಂಬರ್ 23 ರಂದು ಕೊಚ್ಚಿಯ ಕೆಎಂಎಂ ಕಾಲೇಜು ಕ್ಯಾಂಪಸ್‌ನಲ್ಲಿ ಎನ್‌ಸಿಸಿ 21 ಕೇರಳ ಬೆಟಾಲಿಯನ್‌ನ ವಾರ್ಷಿಕ ತರಬೇತಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಅದೇ ದಿನ ಊಟ ಮಾಡಿದ್ದ 60 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು.
ಈ ವಿಷಯ ತಿಳಿದು ಕ್ಯಾಂಪ್‌ಗೆ ಸಂಬಂಧ ಇಲ್ಲದ ನಿಶಾದ್ ಮತ್ತು ನವಾಜ್ ಎನ್ನುವರು ಲೆಫ್ಟಿನಂಟ್ ಕರ್ನಲ್ ಕರ್ನೇಯಿಲ್ ಸಿಂಗ್ ಹಾಗೂ ಬೆಟಾಲಿಯನ್‌ನ ಆಡಳಿತಾಧಿಕಾರಿ ಮೇಲೆ ಹಲ್ಲೆ ಮಾಡಿದ್ದರು. ಚಾಕು ತೋರಿಸಿ ಬೆದರಿಕೆ ಹಾಕಿದ್ದರು ಎಂದು ದೂರಲಾಗಿತ್ತು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ನಾಪತ್ತೆಯಾಗಿದ್ದ ಇಬ್ಬರನ್ನೂ ಬಂಧಿಸಿ ಕ್ರಮ ಜರುಗಿಸಿದ್ದಾರೆ. ಬಂಧಿತರ ವಿರುದ್ಧ ಬಿಎನ್‌ಎಸ್ ವಿವಿಧ ಪ್ರಕರಣಗಳ ಅಡಿ ಪ್ರಕರಣ ದಾಖಲಿಸಲಾಗಿದೆ.