ಕಾಸರಗೋಡು: ನಗರಸಭಾ ಕಾರ್ಯದರ್ಶಿಪಿ.ಎ ಜಸ್ಟಿನ್ ಅವರ ಮೇಲೆ ತಂಡ ಹಲ್ಲೆ ನಡೆಸಿದ ತಂಡದ ಒಬ್ಬನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಳಂಗರೆ ಬಾಂಗೋಡು ನಿವಾಸಿ, ಗುತ್ತಿಗೆದಾರ ಶಿಹಾಬುದ್ದೀನ್ ಬಂಧಿತ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ನಗರಸಭಾ ಸಿಬ್ಬಂದಿ ಎದುರಲ್ಲೇ ತಂಡ ಹಲ್ಲೆ ನಡೆಸಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪಿ.ಎ ಜಸ್ಟಿನ್ ನೀಡಿದ ದೂರಿನನ್ವಯ ಈ ಬಂಧನ ನಡೆದಿದೆ. ಹಲ್ಲೆ ನಡೆಸಿರುವುದು, ಕರ್ತವ್ಯ ನಿರ್ವಹಣೆಗೆ ಅಡಚಣೆ ಮುಂತಾದ ಸಎಕ್ಷನ್ ಅನ್ವಯ ಕೇಸು ದಾಖಲಿಸಲಾಗಿದೆ. ಶುಕ್ರವಾರ ಘಟನೆ ನಡೆದಿದ್ದು, ಕಟ್ಟಡ ನಂಬ್ರ ಪಡೆಯುವ ನಿಟ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ನಕಲಿ ಸಹಿ ಹಾಕಿರುವುದನ್ನು ಪ್ರಶ್ನಿಸಿರುವುದಲ್ಲದೆ, ಇದನ್ನು ರದ್ದುಗೊಳಿಸಿದ್ದ ನಗರಸಭಾ ಕಾರ್ಯದರ್ಶಿ ಪಿ.ಎ ಜಸ್ಟಿನ್ ಅವರ ಮೇಲೆ ತಂಡ ಹಲ್ಲೆ ನಡೆಸಿತ್ತು. ಹಲ್ಲೆ ನಡೆಸಿರುವ ಕೃತ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಇದರ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ನಗರಸಭಾ ಕಾರ್ಯದರ್ಶಿ ಮೇಲಿನ ಹಲ್ಲೆ ಖಂಡಿಸಿ ನಗರಸಭಾ ಸಿಬ್ಬಂದಿ ವರ್ಗ ಕಚೇರಿ ಎದುರು ಪ್ರತಿಭಟನೆ ನಡೆಸಿ, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದರು.