ಬದಿಯಡ್ಕ: ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಪುತ್ತಿಗೆ ಮಠ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನದ ಆಶ್ರಯದಲ್ಲಿ ನಡೆದ ಭಗವದ್ಗೀತೆಯ ಕುರಿತಾದ ಕವನ ರಚನೆಯಲ್ಲಿ ಕಾಸರಗೋಡಿನ ಪತ್ರಕರ್ತ, ಸಾಹಿತಿ ವಿರಾಜ್ ಅಡೂರು ರಚಿಸಿದ 'ಸನಾತನದ ಸಾಗರ' ಕವನಕ್ಕೆ ಬಹುಮಾನದ ಜತೆಗೆ ಚೈತನ್ಯಶ್ರೀ ಪುರಸ್ಕಾರ ದೊರೆತಿದೆ. ವಿರಾಜ್ ಅಡೂರು ಅವರು ಸಾಹಿತ್ಯ, ವ್ಯಂಗ್ಯಚಿತ್ರ ರಚನೆ, ಅಂಕಣ ಬರಹ, ಪತ್ರಿಕೋದ್ಯಮ, ಶಿಬಿರ ಸಂಘಟನೆ, ಶಿಬಿರ ಸಂಪನ್ಮೂಲ ವ್ಯಕ್ತಿಯಾಗಿ ನಾಡಿನಾದ್ಯಂತ ಕ್ರಿಯಾಶೀಲರಾಗಿದ್ದಾರೆ.
ಇವರು ಬರೆದ ಚುಟುಕುಟುಕು, ಬಾನುಲಿಯಿತು, ನಗಿಸುವ ಚಿತ್ರಗಳು, ಗಾದೆ ಗಮ್ಮತ್ತು (ನಾಲ್ಕು ಭಾಗಗಳಲ್ಲಿ), ಉಪನಯನ, ಶಿವಗಿರಿ (ಸಂಪಾದಿತ ಕೃತಿ) ಮೊದಲಾದ ಕೃತಿಗಳು ಪ್ರಕಟಗೊಂಡಿವೆ. ಇವರಿಗೆ ಕೇರಳ ರಾಜ್ಯ ಮಟ್ಟದ ಮಾಧ್ವ ಬ್ರಾಹ್ಮಣ ಅತ್ಯುತ್ತಮ ಚಿತ್ರ ಕಲಾವಿದ ಪ್ರಶಸ್ತಿ, ಕಾಸರಗೋಡಿನ ಕನ್ನಡ ಭವನದ ಕನ್ನಡ ಪಯಸ್ವಿನಿ ಪ್ರಶಸ್ತಿ, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದಿಂದ ಗಡಿನಾಡ ಚೈತನ್ಯ ಪ್ರಶಸ್ತಿ, ಕೋಟೆಗದ್ದೆ ಸೀತಾರಾಮ ಅಡಿಗ ಸ್ಮಾರಕ ಪಾಶುಪತ ಸಾಹಿತ್ಯ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ದೊರೆತಿವೆ.ಇವರು ರಚಿಸಿದ ಸುಮಾರು 2000 ವ್ಯಂಗ್ಯಚಿತ್ರಗಳು, 500ರಷ್ಟು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಡಿ.15ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣ ವೇದಿಕೆಯಲ್ಲಿ ನಡೆಯುವ ಕಥಾಬಿಂದು ಗೀತಾ ಸಾಹಿತ್ಯೋತ್ಸವ ಸಂದರ್ಭದಲ್ಲಿ ಪುರಸ್ಕಾರ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.