ಕುಂಬಳೆ:ಗಡಿನಾಡು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಹಕ್ಕು ಸಂರಕ್ಷಣೆಗೆ ಕೇರಳ ಸರ್ಕಾರ ಬದ್ಧವಾಗಿದೆ. ಭಾಷಾ ವೈವಿಧ್ಯತೆಯ ಕಾಸರಗೋಡಿನ ಬಹುಮುಖ ಆಯಾಮದ ಸಾಂಸ್ಕøತಿಕ-ಸಾಮಾಜಿಕ ವ್ಯವಸ್ಥೆಗಳಿಗೆ ಬೆಂಬಲವಾಗಿ ಸರ್ಕಾರ ಅಗತ್ಯದ ನೆರವು ನೀಡಲಿದೆ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಸಚಿವ ಜಿ.ಆರ್.ಅನಿಲ್ ತಿಳಿಸಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು, ಭಾರತ ಭವನ, ತಿರುವನಂತಪುರಂ ಕೇರಳ ಸರ್ಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ತಿರುವನಂತಪುರದ ಭಾರತ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಅನಂತಪುರಿ ಗಡಿ ಕನ್ನಡ ಸಂಸ್ಕೃತಿ ಉತ್ಸವ 2024 ಸಮಾರಂಭದ ಸಮಾರೋಪದಲ್ಲಿ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಗೈದು ಸಚಿವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಮಾತನಾಡಿ, ಕಾಸರಗೋಡಿನ ಕನ್ನಡ ಭಾಷಿಗರು ತಿರುವನಂತಪುರಕ್ಕೆ ಆಗಮಿಸಿ ಮಾಡಿರುವ ಕಾರ್ಯಕ್ರಮ ವಿಶೇಷವಾಗಿ ಗಮನಾರ್ಹವಾದುದು. ನಾಡಿನ ಪೈಶಾಚಿಕ, ಕ್ರೂರತೆಗಳನ್ನು ಹೋಗಲಾಡಿಸಿ ಸಾಮಾಜಿಕ ಸ್ವಸ್ಥತೆ ನಿರ್ಮಿಸುವುದೇ ನಮ್ಮೆಲ್ಲರ ಆತ್ಯಂತಿಕ ಲಕ್ಷ್ಯವಾಗಿದೆ.ಈ ನಿಟ್ಟಿನಲ್ಲಿ ಇಂತಹ ಸೌಹಾರ್ಧತೆಯುತ ಕಾರ್ಯಕ್ರಮ ಮಹತ್ವಪಡೆದಿದೆ ಎಂದರು.
ಇನ್ನೊಬ್ಬ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮಾತನಾಡಿ, ಕಾಸರಗೊಡಿನ ಶ್ರೀಮಂತ ಭಾಷಾ ಪರಂಪರೆಗೆ ಯಾವ ಕಾರಣಕ್ಕೂ ಧಕ್ಕೆಯಾಗದು.ಇಲ್ಲಿಯ ಜನರ ವಿಶಾಲ ಹೃದಯವಂತಿಕೆ ಅಸೀಮವಾದುದು. ಹೊಸ ತಲೆಮಾರಿಗೆ ಸಂಸ್ಕøತಿ, ಸೌಹಾರ್ಧತೆಗಳನ್ನು ಕಲಿಸುವಲ್ಲಿ ಇಂತಹ ಬಹು ಆಯಾಮದ ಚಟುವಟಿಕೆಗಳು ಬೆಂಬಲ ನೀಡುತ್ತದೆ ಎಂದರು.
ವಿಶ್ರಾಂತ ಕುಲಪತಿ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು.ವಿವಿಧ ವಲಯಗಳ ಸಾಧಕರಾದ ಮಂಜುನಾಥ ಆಳ್ವ ಮಡ್ವ, ಬಿ.ವಸಂತ ಪೈ ಬದಿಯಡ್ಕ, ಜೋಸಫ್ ಮಾಥಿಯಾಸ್, ಅಶ್ರಫ್ ಶಾ ಮಂತೂರು, ಪ್ರಕಾಶ್ ಮತ್ತೀಹಳ್ಳಿ, ಡಾ.ಮಲ್ಲಿಕಾರ್ಜುನ ಎಸ್.ನಾಸಿ, ನಫೀಸಾ ಪೆರುವಾಯಿ, ಹುಸೈನ್ ಕಾಟಿಪಳ್ಳ, ಹನುಮಂತ ವಿ.ಬೆನ್ನೂರ, ರಾಜನ್ ಮುನಿಯೂರ್ ಅವರಿಗೆ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಚಿವ ಜಿ.ಆರ್.ಅನಿಲ್ ಪ್ರಶಸ್ತಿ ಪ್ರದಾನಗೈದರು.
ಕೇರಳ ಸಹಕಾರಿ ಕೃತಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ರಾಜ್ಯಾಧ್ಯಕ್ಷ ಅಡ್ವ.ಶಾಜಿ ಮೋಹನ್, ತಿರುವನಂತಪುರ ಗ್ರಾಹಕ ತರ್ಕ ಪರಿಹಾರ ಆಯೋಗ ಅಧ್ಯಕ್ಷ ಪಿ.ವಿ.ಜಯರಾಜ್, ಕೇರಳ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ರಾಮ, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ ಜೆ.ಎಸ್.,ತಿರುವನಂತಪುರದ ಕರ್ನಾಟಕ ಸಂಘದ ಅಧ್ಯಕ್ಷೆ ಭಾನುಮತಿ ಶೆಟ್ಟಿ,ತಿರುವನಂತಪುರ ಮಾಧ್ವ ತುಳು ಬ್ರಾಹ್ಮಣ ಸಮಾಜದ ಅಧ್ಯಕ್ಷ ನಾಗರಾಜ ಪಿ.ಎಂ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಸಂಸ್ಥಾಪಕ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎ.ಶ್ರೀನಾಥ್ ಸ್ವಾಗತಿಸಿ, ಅಖಿಲೇಶ್ ನಗುಮುಗಂ ವಂದಿಸಿದರು. ರವಿ.ನಾಯ್ಕಾಪು ನಿರೂಪಿಸಿದರು.