ಮಂಜೇಶ್ವರ: ನಾಡಿನ ಪ್ರಖ್ಯಾತ ನಾಟಕ ತಂಡ ಕೃಷ್ಣ ಜಿ ಮಂಜೇಶ್ವರ ಸಾರಥ್ಯದ ಶಾರದಾ ಆಟ್ರ್ಸ್ ಕಲಾವಿದರು ಮಂಜೇಶ್ವರ ಸಂಸ್ಥೆಯ ಬೆಳ್ಳಿಹಬ್ಬ ಸಂಭ್ರಮದ ಕಾರ್ಯಕ್ರಮಗಳು ಜನವರಿ 17 ,18, 19 ರಂದು ಉದ್ಯಾವರ ಮಾಡದ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದ ವಠಾರದಲ್ಲಿ ವಿಜೃಂಭಣೆಯಿಂದ ಜರಗಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬುಧವಾರ ಸಂಜೆ ಮಾಡ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಕಣಿಯೂರು ಶ್ರೀ ಮಹಾಬಲೇಶ್ವರ ಸ್ವಾಮೀಜಿಗಳು, ಈ ಸಂಸ್ಥೆಯ ಜೊತೆಗೆ ತನಗೆ 21 ವರ್ಷಗಳ ಸಂಪರ್ಕವಿದ್ದು, ಅತ್ಯಂತ ಸುಂದರವಾದ ಸಂದೇಶವಿರುವ ನಾಟಕಗಳನ್ನು ನಾಡಿಗೆ ನೀಡಿದ ಸಂಸ್ಥೆಗೆ ಮಂಗಳಕರವಾಗಿ ಭವಿಷ್ಯ ಕೂಡಿಬರಲಿ. ಓರ್ವ ಕಲಾವಿದನಾಗಿ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಎಷ್ಟು ಸವಾಲಿನದ್ದೆಂಬ ಅರಿವು ನನಗಿದೆ. ಹಲವು ಸವಾಲುಗಳನ್ನು ಎದುರಿಸಿ ಇಷ್ಟೊಂದು ಎತ್ತರಕ್ಕೆ ಏರಿರುವ ಈ ಸಂಸ್ಥೆಗೆ ಸುವರ್ಣ ಮಹೋತ್ಸವ ಆಚರಿಸುವ0ತಾಗಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಪುತ್ತೂರು ಅಕ್ಷಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ಈ ಸಂಸ್ಥೆಯ ನಾಟಕಗಳು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುವ ಕಾರ್ಯವನ್ನು ಮಾಡುತಿದ್ದು ತನ್ನಿಂದಾಗುವ ಎಲ್ಲಾ ಸಹಾಯ ಸಹಕಾರಗಳನ್ನು ನೀಡುವೆನೆಂಬ ಭರವಸೆಯನ್ನು ನೀಡಿ ಶುಭಹಾರೈಸಿದರು.
ಬಡಾಜೆ ಬೂಡು ಬ್ರಹ್ಮ ಶ್ರೀ ಗೋಪಾಲಕೃಷ್ಣ ತಂತ್ರಿಗಳು ಶುಭಹಾರೈಸಿದರು. ಬೆಳ್ಳಿ ಹಬ್ಬ ಸಂಭ್ರಮ ಸಮಿತಿಯ ಅಧ್ಯಕ್ಷ ಸಂಪತ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿಷಿ ಅನಿಲ್ ಪಂಡಿತ್, ಕೃಷ್ಣ ಭಟ್, ಉದ್ಯಾವರ ಮಾಡದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡ ಶುಭ ಹಾರೈಸಿ ಆಶೀರ್ವದಿಸಿದರು.
ಬೀರು ಚೌಟ, ತಿಮಿರಿ ಬೆಳ್ಚಪ್ಪಾಡ, ಮುಂಡತ್ತಾಯ ಬೆರ್ಲಚಪ್ಪಾಡರು, ಪದ್ಮ ಗುರಿಕಾರರು, ಮಾಡದ ಅಧ್ಯಕ್ಷ ಕಿರಣ್ ಶೆಟ್ಟಿ ಮಾಡ, ಉದ್ಯಮಿಗಳಾದ ಮೋಹನ್ ಶೆಟ್ಟಿ ತೂಮಿನಾಡು ಹಾಗೂ ನರಸಿಂಹ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜೇಶ್ ಮುಗುಳಿ ಸ್ವಾಗತಿಸಿ, ಹರೀಶ್ ಮಾಡ ವಂದಿಸಿದರು, ದಿನಕರ್ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು.