ಇಂಫಾಲ್(PTI): ಕೇಂದ್ರ ಗೃಹ ಸಚಿವಾಲಯವು ಮಣಿಪುರದಲ್ಲಿ 'ಸಂರಕ್ಷಿತ ಪ್ರದೇಶ ಪರವಾನಗಿ'(ಪಿಎಪಿ) ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಿದೆ.
ಭದ್ರತೆ ವಿಚಾರವಾಗಿ, ನೆರೆ ದೇಶಗಳಿಂದ ಮಣಿಪುರದೊಳಗೆ ನುಸುಳುವವರಿಂದ ಉಂಟಾಗುತ್ತಿರುವ ಸಮಸ್ಯೆ ಪರಿಗಣಿಸಿ, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.
'ಈ (ಪಿಎಪಿ) ವ್ಯವಸ್ಥೆ ಜಾರಿಯಾಗಿರುವುದರಿಂದ, ಮಣಿಪುರಕ್ಕೆ ಭೇಟಿ ನೀಡುವ ವಿದೇಶಿಯರ ಚಲನವಲಗಳ ಮೇಲೆ ನಿಗಾ ಇಡಲಾಗುತ್ತದೆ. ಅಲ್ಲದೇ, 'ವಿದೇಶಿಯರ (ಸಂರಕ್ಷಿತ ಪ್ರದೇಶಗಳು) ಆದೇಶ-1958'ರ ಅನ್ವಯ, ರಾಜ್ಯಕ್ಕೆ ಭೇಟಿ ನೀಡುವ ವಿದೇಶಿ ಪ್ರಜೆಗಳು 'ಪಿಎಪಿ' ಪಡೆಯುವುದು ಕಡ್ಡಾಯ' ಎಂದು ಪ್ರಕಟಣೆ ತಿಳಿಸಿದೆ.
ನಾಗಾಲ್ಯಾಂಡ್ ಹಾಗೂ ಮಿಜೋರಾಂ ರಾಜ್ಯಗಳಲ್ಲಿಯೂ 'ಪಿಎಪಿ' ವ್ಯವಸ್ಥೆಯನ್ನು ಗೃಹ ಸಚಿವಾಲಯ ಜಾರಿಗೊಳಿಸಿದೆ.
ಕಾರಣವೇನು?: ಸೇನಾಪತಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಪ್ರಯಾಣಿಸುವಾಗ ಕಾಂಗ್‌ಪೋಕ್‌ಪಿ ಜಿಲ್ಲೆ ಮೂಲಕ ಸಾಗದಂತೆ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರಿಗೆ 'ಕುಕಿ ಜೋ ಕೌನ್ಸಿಲ್' ಎಂಬ ಸಂಘಟನೆ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು.
'ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಮಣಿಪುರ ಪೊಲೀಸರು ತನಿಖೆ ನಡೆಸಿದಾಗ, ಮಣಿಪುರದಲ್ಲಿ ಅಂತಹ ಹೆಸರಿನ ಸಂಘಟನೆಯೇ ಅಸ್ತಿತ್ವದಲ್ಲಿ ಇಲ್ಲ ಎಂಬುದು ಗೊತ್ತಾಯಿತು. ಅಲ್ಲದೇ, ಈ ಸಂಘಟನೆಯ ಮೂಲ ಹಾಗೂ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿರುವುದು ಕಂಡುಬಂತು' ಎಂದು ಪ್ರಕಟಣೆ ತಿಳಿಸಿದೆ.
'ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದ್ದು, ಸಂಘಟನೆಯ ಸ್ವರೂಪವನ್ನು ದೃಢಪಡಿಸಿಕೊಳ್ಳುವುದಕ್ಕಾಗಿ ಎಫ್‌ಐಆರ್ ದಾಖಲಿಸಲು ನಿರ್ಧರಿಸಿದೆ' ಎಂದು ಪ್ರಕಟಣೆ ತಿಳಿಸಿದೆ.