ಜಮ್‌ಶೆಡ್‌ಪುರ: ಬುಧವಾರ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಜಾರ್ಖಂಡ್‌ನ ಜಮ್‌ಶೆಡ್‌ಪುರ ನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲೋಕ್ ಕುಮಾರ್ ಭಗತ್ ಅಲಿಯಾಸ್ ಮುನ್ನಾ (28) ಮೃತಪಟ್ಟ ಕಾರ್ಯಕರ್ತ. ಕದ್ಮಾ ಪೊಲೀಸ್ ಠಾಣೆ ವ್ಯಾಪ್ತಿಯ ಶಾಸ್ತ್ರಿನಗರ ಪ್ರದೇಶದ ತನ್ನ ಮನೆಯ ಬಳಿ ನಿಂತಿದ್ದಾಗ, ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಂಡೇಟಿನ ಗಾಯಕ್ಕೆ ಭಗತ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಅವರನ್ನು ಟಾಟಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ಆರೋಪಿಗಳನ್ನು ಗುರುತಿಸಲಾಗಿದ್ದು, ಆದರೆ ಇದುವರೆಗೆ ಅವರನ್ನು ಬಂಧಿಸಲಾಗಿಲ್ಲ. ಆರೋಪಿಗಳಲ್ಲಿ ಒಬ್ಬ ಹಾಗೂ ಮೃತಪಟ್ಟ ಭಗತ್ ನೆರೆಹೊರೆಯವರಾಗಿದ್ದು, ಹಳೆಯ ವೈಷಮ್ಯ ಇತ್ತು. ಇಬ್ಬರಿಗೂ ಕ್ರಿಮಿನಲ್ ಹಿನ್ನಲೆಗಳಿವೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ವಿವಾಹವಾಗಿದ್ದ ಭಗತ್ ಮೇಲೆ ಜಾರ್ಖಂಡ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಾಸ್ತ್ರಿನಗರದಲ್ಲಿ ಪ್ರತಿಸ್ಪರ್ಧಿ ಪಕ್ಷದ ಕಾರ್ಯಕರ್ತನನ್ನು ಥಳಿಸಿದ ಆರೋಪ ಇದೆ. ಎಫ್‌ಐಆರ್ ಕೂಡ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಬನ್ನಾ ಗುಪ್ತಾ ಅವರು ಭಗತ್ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.