HEALTH TIPS

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆ ಕುರಿತು ಭಾರತ ಕಳವಳ

 ಢಾಕಾ: ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರ ಸುರಕ್ಷತೆ ಕುರಿತಂತೆ ಭಾರತವು ತೀವ್ರ ಕಳವಳ ವ್ಯಕ್ತಪಡಿಸಿದೆ.

ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರಗಳು ಹಾಗೂ ರಾಜತಾಂತ್ರಿಕ ಕಚೇರಿಗಳ ಮೇಲೆ ದಾಳಿಗಳು ನಡೆದಿರುವುದು ವಿಷಾದಕರ ಎಂದು ಹೇಳಿದೆ.


ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಅವರು ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಮೊಹಮ್ಮದ್‌ ಜಶೀಂ ಉದ್ದಿನ್‌ ಜತೆಗೆ ಸೋಮವಾರ ನಡೆಸಿದ ಸಭೆಯಲ್ಲಿ ಭಾರತ ತನ್ನ ಕಳವಳ ವ್ಯಕ್ತಪಡಿಸಿದೆ.

ಆಗಸ್ಟ್ 5ರಂದು ಪ್ರಧಾನಮಂತ್ರಿ ಪ್ರಧಾನಿ ಶೇಖ್‌ ಹಸೀನಾ ಪದಚ್ಯುತಗೊಂಡು, ಭಾರತಕ್ಕೆ ಪಲಾಯನಗೈದ ಬಳಿಕ ಉಭಯ ರಾಷ್ಟ್ರಗಳ ನಡುವೆ ನಡೆದ ಉನ್ನತ ಮಟ್ಟದ ಹಿರಿಯ ಅಧಿಕಾರಿಗಳ ಮೊದಲ ಸಭೆ ಇದಾಗಿದೆ.

'ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಕಾರಾತ್ಮಕ, ರಚನಾತ್ಮಕ ಹಾಗೂ ಪರಸ್ಪರ ಅನುಕೂಲಕರ ಸಂಬಂಧವನ್ನು ಬಾಂಗ್ಲಾದೇಶದ ಜತೆ ಹೊಂದಲು ಭಾರತ ಬಯಸುತ್ತದೆ. ಉಭಯ ದೇಶಗಳ ಜನರ ಹಿತಾಸಕ್ತಿಗಾಗಿ ಪರಸ್ಪರ ಸಹಕಾರವನ್ನು ಮುಂದುವರಿಸದಿರಲು ಯಾವುದೇ ಕಾರಣ ಇಲ್ಲ' ಎಂದು ಸಭೆಯ ಬಳಿಕ ಮಿಸ್ರಿ ಸುದ್ದಿಗಾರರಿಗೆ ತಿಳಿಸಿದರು.

'ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರ ಸುರಕ್ಷತೆ ಹಾಗೂ ಕಲ್ಯಾಣ ವಿಚಾರಗಳ ಕುರಿತಂತೆ ನಮ್ಮ ಕಳವಳವನ್ನು ವ್ಯಕ್ತಪಡಿಸಿದ್ದೇವೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರಗಳು ಹಾಗೂ ರಾಜತಾಂತ್ರಿಕ ಕಚೇರಿಗಳ ಮೇಲೆ ನಡೆದ ದಾಳಿಯ ಘಟನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ಎಲ್ಲ ವಿಷಯಗಳ ಬಗ್ಗೆ ರಚನಾತ್ಮಕ ಕ್ರಮಗಳನ್ನು ಬಾಂಗ್ಲಾದೇಶದಿಂದ ಭಾರತ ನಿರೀಕ್ಷಿಸುತ್ತದೆ' ಎಂದು ಅವರು ಹೇಳಿದರು.


ಯೂನುಸ್‌ ಜತೆ ಭೇಟಿ

ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್‌ ಯೂನುಸ್‌ ಹಾಗೂ ವಿದೇಶಾಂಗ ಇಲಾಖೆಯ ಸಲಹೆಗಾರ ಮೊಹಮ್ಮದ್‌ ತೌಹೀಸ್‌ ಹುಸೈನ್‌ ಅವರನ್ನು ಸಹ ಮಿಸ್ರಿ ಅವರು ಭೇಟಿಯಾಗಿ ಮಾತುಕತೆ ನಡೆಸಿದರು.

'ಬಾಂಗ್ಲಾದೇಶದಲ್ಲಿ ಸ್ಥಿರ ಪ್ರಜಾಪ್ರಭುತ್ವ, ಶಾಂತಿ, ಅಭಿವೃದ್ಧಿ ಹಾಗೂ ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ರಚನೆಯನ್ನು ಭಾರತವು ಬೆಂಬಲಿಸಲಿದೆ ಎಂದು ಸಭೆಯಲ್ಲಿ ಮಿಸ್ರಿ ಹೇಳಿದರು' ಎಂದು ದೆಹಲಿಯಲ್ಲಿ ಭಾರತದ ವಿದೇಶಾಂಗ ಇಲಾಖೆ ಬಿಡುಗಡೆಗೊಳಿಸಿದ ಪ್ರಕಟಣೆ ತಿಳಿಸಿದೆ.

ರಾಜಕೀಯ, ಭದ್ರತಾ ವಿಷಯಗಳು, ಗಡಿ ನಿರ್ವಹಣೆ, ವ್ಯಾಪಾರ, ಸಂಪರ್ಕ, ವಿದ್ಯುತ್‌ ಸೇರಿದಂತೆ ಹಲವು ವಿಷಯಗಳ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದೆ.

'ಆಗಸ್ಟ್‌ ತಿಂಗಳಲ್ಲಿ ಬಾಂಗ್ಲಾದೇಶದಲ್ಲಿನ ರಾಜಕೀಯ ಬದಲಾವಣೆಗಳ ನಂತರವೂ ನಮ್ಮ ನಾಯಕರ ನಡುವೆ ಸಂಪರ್ಕ ಮುಂದುವರಿದಿದೆ. ಬಾಂಗ್ಲಾ ಸರ್ಕಾರದ ಮುಖ್ಯ ಸಲಹೆಗಾರರು ಅಧಿಕಾರ ವಹಿಸಿಕೊಂಡ ಬಳಿಕ ಶುಭಾಶಯ ಕೋರಿದವರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಮೊದಲಿಗರಾಗಿದ್ದರು. ಈ ಇಬ್ಬರ ನಡುವೆ ಸೌಹಾರ್ದಯುತ ದೂರವಾಣಿ ಮಾತುಕತೆಗಳು ನಡೆದಿವೆ' ಎಂದು ಮಿಸ್ರಿ ತಿಳಿಸಿದರು.

ಆಗಸ್ಟ್‌ ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ಹಸೀನಾ ಸರ್ಕಾರ ಪತನಗೊಂಡ ಬಳಿಕ ಮೊಹಮ್ಮದ್‌ ಯೂನುಸ್‌ ಅವರು ಮಧ್ಯಂತರ ಸರ್ಕಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇದಾದ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿತ್ತು. ಕೆಲವು ವಾರದ ಹಿಂದೆ ಹಿಂದೂಗಳ ಮೇಲೆ ದಾಳಿ ಹಾಗೂ ಹಿಂದೂ ಮುಖಂಡ ಚಿನ್ಮಯಿ ಕೃಷ್ಣದಾಸ್ ಬಂಧನದ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು.

ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ವೇಳೆ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರನ್ನು ಬಾಂಗ್ಲಾದೇಶದ ವಿದೇಶಾಂಗ ಇಲಾಖೆಯ ಸಲಹೆಗಾರ ಮೊಹಮ್ಮದ್‌ ತೌಹೀದ್‌ ಹುಸೈನ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries