ಕಠ್ಮಂಡು: ನೇಪಾಳದಲ್ಲಿ ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿದ್ದ ಇಬ್ಬರು ಭಾರತೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದವರಾದ ದೀಪಕ್ ಗುಪ್ತಾ (44) ಮತ್ತು ಸುಮಿತ್ ವರ್ಮಾ (34) ಬಂಧಿತರು. ಇವರನ್ನು ನೇಪಾಳದ ಕೈಲಾಲಿ ಜಿಲ್ಲೆಯ ಧಂಗಾಧಿ ಉಪ ಮಹಾನಗರದಲ್ಲಿ ಬಂಧಿಸಿರುವ ಪೊಲೀಸರು, ಆರೋಪಿಗಳ ಬಳಿ ಇದ್ದ 549.2 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಯಾವುದೇ ಕಸ್ಟಮ್ಸ್ ಸುಂಕವನ್ನು ಪಾವತಿಸದೆ ಅವರು ಭಾರತೀಯ ನಂಬರ್ ಪ್ಲೇಟ್ ಹೊಂದಿದ್ದ ಕಾರಿನಲ್ಲಿ ಚಿನ್ನವನ್ನು ಸಾಗಿಸುತ್ತಿದ್ದರು ಎಂದು ನೇಪಾಳ ಪೊಲೀಸ್ ಪ್ರಧಾನ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಭಾರತಕ್ಕೆ ಹೋಲಿಸಿದರೆ ನೇಪಾಳದಲ್ಲಿ ಚಿನ್ನಕ್ಕೆ ಹೆಚ್ಚಿನ ಕಸ್ಟಮ್ಸ್ ಸುಂಕ ವಿಧಿಸಲಾಗುತ್ತದೆ. ಹಾಗಾಗಿ, ನೇಪಾಳದಲ್ಲಿ ಚಿನ್ನ ಅತ್ಯಂತ ದುಬಾರಿಯಾಗಿದೆ.