ನವದೆಹಲಿ: 'ಇಂಡಿಯಾ' ಮೈತ್ರಿಕೂಟದ ನಾಯಕರನ್ನಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಅಂತಿಮಗೊಳಿಸಬೇಕು ಎಂದು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪಟ್ಟು ಹಿಡಿದು ಆ ಮೈತ್ರಿಕೂಟದ ವಿವಿಧ ಪಕ್ಷಗಳ ನಾಯಕರಲ್ಲಿ ಆಶ್ಚರ್ಯ ಮೂಡಿಸಿದ್ದರು ಮಮತಾ ಬ್ಯಾನರ್ಜಿ.
ಆದರೆ ಅದಾದ 12 ತಿಂಗಳ ನಂತರದಲ್ಲಿ ಈ ಸ್ಥಾನಕ್ಕೆ ತಾವೇ ಅತ್ಯಂತ ಹೆಚ್ಚು ಸೂಕ್ತ ಎಂದು ಮಮತಾ ಪ್ರತಿಪಾದಿಸುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಒಳ್ಳೆಯ ಸಾಧನೆ ತೋರಿದ್ದ ಕಾಂಗ್ರೆಸ್ ಪಕ್ಷವು ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದೆ. ಪಕ್ಷಕ್ಕೆ ಇದು ಹಿನ್ನಡೆ ಎಂದು ವ್ಯಾಖ್ಯಾನಿಸಲಾಗಿದೆ. ಇಂತಹ ಸಂದರ್ಭದಲ್ಲಿ ಮಮತಾ ಅವರು ಕಾಂಗ್ರೆಸ್ಸಿಗೆ ವಿರುದ್ಧವಾಗಿ ನಿಲ್ಲಲು ಯತ್ನಿಸುತ್ತಿದ್ದಾರೆ.
'ಇಂಡಿಯಾ' ಮೈತ್ರಿಕೂಟದ ಪಕ್ಷಗಳ ಸದನ ನಾಯಕರ ಸಭೆಯಲ್ಲಿ ಭಾಗಿಯಾಗಲು ನಿರಾಕರಿಸುವ ಮೂಲಕ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಅದಾನಿ ವಿಚಾರವಾಗಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸುವ ಮೂಲಕ ಕಾಂಗ್ರೆಸ್ಸಿಗೆ ಸಂದೇಶ ರವಾನಿಸುತ್ತಿದ್ದ ಮಮತಾ ಅವರು ತಮ್ಮ ಉದ್ದೇಶವನ್ನು ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
'ಇಂಡಿಯಾ' ಮೈತ್ರಿಕೂಟ ಮುನ್ನಡೆಸುವ ಇಚ್ಛೆಯನ್ನು ಮಮತಾ ವ್ಯಕ್ತಪಡಿಸುವ ಮೊದಲು ಟಿಎಂಸಿ ಪ್ರಮುಖರಾದ ಕಲ್ಯಾಣ್ ಬ್ಯಾನರ್ಜಿ ಕೀರ್ತಿ ಆಜಾದ್ ಕುನಾಲ್ ಘೋಷ್ ಅವರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವೈಫಲ್ಯ ಕಂಡಿದೆ ಮಮತಾ ಅವರು ಹೆಚ್ಚು ಉತ್ತಮ ಸಾಧನೆ ತೋರಬಲ್ಲರು ಎಂದು ಹೇಳಿದ್ದರು.
ಕಳೆದ ವರ್ಷ ಮಮತಾ ಮಂಡಿಸಿದ್ದ ಆಗ್ರಹವು ಜೆಡಿಯು ನಾಯಕ ನಿತೀಶ್ ಕುಮಾರ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡಿತ್ತು ಎಂಬ ವಿಶ್ಲೇಷಣೆಗಳು ಇದ್ದವು. ಆದರೆ ಈ ಬಾರಿ ಮಮತಾ ಆಡಿರುವ ಮಾತುಗಳು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡಿವೆ.
ಈ ಬಾರಿ ಮಮತಾ ಆಡಿರುವ ಮಾತುಗಳಿಗೆ ಕಾಂಗ್ರೆಸ್ ಮುಖಂಡ ಉದಿತ್ ರಾಜ್ ಆಕ್ಷೇಪ ದಾಖಲಿಸಿದ್ದಾರೆ. ಮಮತಾ ನೇತೃತ್ವದ ಪಕ್ಷಕ್ಕೆ ಬಂಗಾಳದ ಆಚೆಗೆ ವಿಸ್ತರಿಸಲು ಆಗಿಲ್ಲದಿರುವಾಗ ಮಮತಾ ಅವರು ರಾಷ್ಟ್ರಮಟ್ಟದ ಮೈತ್ರಿಕೂಟಕ್ಕೆ ನಾಯಕತ್ವ ನೀಡಲು ಸಾಧ್ಯವೇ ಎಂದು ರಾಜ್ ಪ್ರಶ್ನಿಸಿದ್ದಾರೆ.
ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಎಚ್ಚರಿಕೆಯ ನಿಲುವು ತಾಳಿದ್ದು ಮಮತಾ ಅವರು ಮೈತ್ರಿಕೂಟದ ಅವಿಭಾಜ್ಯ ವ್ಯಕ್ತಿ ಎಂದಿದ್ದಾರೆ. ಕಾಂಗ್ರೆಸ್ಸಿನ ಮುಖಂಡರಾದ ತಾರೀಕ್ ಅನ್ವರ್ ಮತ್ತು ಟಿ.ಎಸ್. ಸಿಂಹದೇವ ಅವರು ಮೈತ್ರಿಕೂಟದಲ್ಲಿ ನಿರ್ಧಾರಗಳನ್ನು ಎಲ್ಲರೂ ಒಂದಾಗಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಟಿಎಂಸಿ ತಾಳಿದ ನಿಲುವು 'ಇಂಡಿಯಾ' ಮೈತ್ರಿಕೂಟವು ಸದನದಲ್ಲಿನ ಹೋರಾಟಗಳ ವಿಚಾರವಾಗಿ ರೂಪಿಸಿದ್ದ ತಂತ್ರಗಾರಿಕೆಯನ್ನು ದುರ್ಬಲಗೊಳಿಸಿತ್ತು. ಇದು ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿತ್ತು. ತಾನು ಕಾಂಗ್ರೆಸ್ ಪಕ್ಷದ ಜೊತೆ ಚುನಾವಣಾ ಮೈತ್ರಿ ಹೊಂದಿಲ್ಲದ ಕಾರಣಕ್ಕೆ ಆ ಪಕ್ಷ ಹೇಳಿದ್ದೆಲ್ಲವನ್ನೂ ತಾನು ಕೇಳಬೇಕಾಗಿ ಇಲ್ಲ ಎಂಬುದು ಟಿಎಂಸಿ ವಾದ. ಮಮತಾ ಅವರ ಮಾತುಗಳು ಕಾಂಗ್ರೆಸ್ ಪಕ್ಷದ ಪ್ರಭಾವವನ್ನು ಕುಗ್ಗಿಸುವ ಯತ್ನ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಇದು ಟಿಎಂಸಿ ಉತ್ತರಾಧಿಕಾರಿ ವಿಚಾರವಾಗಿ ನಡೆದಿರುವ ಸಂಘರ್ಷದಿಂದ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ಎಂದೂ ಹೇಳುತ್ತಾರೆ. ಮಮತಾ ಅವರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಬಂಗಾಳದ ಆಡಳಿತದಲ್ಲಿ ದೊಡ್ಡ ಪಾತ್ರ ಇರಬೇಕು ಎಂದು ಪಕ್ಷದಲ್ಲಿನ ಒಂದು ವರ್ಗವು ಹೇಳುತ್ತಿದೆ.