ನವದೆಹಲಿ: ಬಾಂಗ್ಲಾದೇಶದಲ್ಲಿ ಈಚೆಗೆ ನಡೆದ ಬೆಳವಣಿಗೆಗಳ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿರುವ ಹೊರತಾಗಿಯೂ, ಅಲ್ಲಿನ ಎಂಟು ಮಾಜಿ ಸೈನಿಕರು ಮತ್ತು ಸೇನೆಯ ಇಬ್ಬರು ಅಧಿಕಾರಿಗಳು '1971ರ ಬಾಂಗ್ಲಾ ವಿಮೋಚನಾ ಯುದ್ದ'ದ ಸ್ಮರಣಾರ್ಥ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೋಲ್ಕತ್ತಕ್ಕೆ ಬಂದರು.
ಅದಕ್ಕೆ ಪ್ರತಿಯಾಗಿ ಭಾರತದ ಎಂಟು ಮಾಜಿ ಸೈನಿಕರು ಮತ್ತು ಇಬ್ಬರು ಅಧಿಕಾರಿಗಳು ಯುದ್ಧದ 53ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಿರುವ 'ವಿಜಯ್ ದಿವಸ್' ಕಾರ್ಯಕ್ರಮದಲ್ಲಿ ಭಾಗಿಯಾಗಲು ಢಾಕಾ ತಲುಪಿದರು.
ಬಾಂಗ್ಲಾದ ನಿಯೋಗವು ಭಾರತೀಯ ಸೇನೆಯ ಪೂರ್ವ ಕಮಾಂಡ್‌ನ ಕೇಂದ್ರ ಕಚೇರಿಯಾಗಿರುವ ಕೋಲ್ಕತ್ತದ ಫೋರ್ಟ್ ವಿಲಿಯಂನಲ್ಲಿ ಸೋಮವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತು.
ಬಾಂಗ್ಲಾದೇಶವನ್ನು ಸಾರ್ವಭೌಮ ರಾಷ್ಟ್ರವನ್ನಾಗಿಸಲು ಕಾರಣವಾದ 1971ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತವು ಜಯಗಳಿಸಿದ ನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್ 16ರಂದು 'ವಿಜಯ್ ದಿವಸ್' ಆಚರಿಸಲಾಗುತ್ತದೆ.