ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದಿಂದ ಕಾಸರಗೋಡು ಜಿಲ್ಲೆಯಲ್ಲಿ ಆಯೋಜಿಸಲಿರುವ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಕನ್ನಡಪರ ಚಟುವಟಿಕೆಗಳಿಗೆ ಜಿಲ್ಲೆಯ ಕನ್ನಡ ಸಂಘಟನೆಗಳ ಸಹಕಾರ ಯಾಚಿಸುವುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್‍ನಾರಾಯಣ್ ತೊಟ್ಟೆತ್ತೋಡಿ ತಿಳಿಸಿದ್ದಾರೆ.
ಅವರು ಮಂಡ್ಯದಲ್ಲಿ ನಡೆಯಲಿರುವ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಮಾಹಿತಿ ನೀಡಲು ಕಾಸರಗೋಡು ಉಡುಪಿಗಾರ್ಡನ್ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಂಡ್ಯದಲ್ಲಿ ನಡೆಯಲಿರುವ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಾಸರಗೋಡು ಜಿಲ್ಲೆಯಿಂದ ಹತ್ತು ಮಂದಿ ಪ್ರತಿನಿಧಿಗಳನ್ನು ಕಳುಹಿಸಲು ತೀರ್ಮಾನಿಸಲಾಗಿದೆ. ಜತೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ, ನಿವೃತ್ತ ಪ್ರಾಧ್ಯಾಪಕ ಪ್ರೊ. ಪಿ.ಶ್ರೀಕೃಷ್ಣ ಭಟ್ ಅವರನ್ನು ಹಾಗೂ ಕವಿಗೋಷ್ಠಿಗೆ ಕವಯಿತ್ರಿ ಲಕ್ಷ್ಮೀ ವಿ. ಭಟ್ ಅವರನ್ನು ಜಿಲ್ಲೆಯಿಂದ ಕಳುಹಿಸಿಕೊಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಮಂಡ್ಯದಲ್ಲಿ ನಡೆಯಲಿರುವ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣಪತ್ರಿಕೆಯನ್ನು ಪತ್ರಕರ್ತರು ಹಾಗೂ ವಿವಿಧ ಸಂಘಟನೆಗಳಿಗೆ ವಿತರಿಸಲಾಯಿತು.
ಕಸಾಪ ಕೇರಳ ಗಡಿನಾಡ ಘಟಕ ವತಿಯಿಂದ ನಡೆಸಲುದ್ದೇಶಿಸಿರುವ ಸಾಹಿತಯ ಸಮ್ಮೇಳನದ ಯಶಸ್ವಿಗಾಗಿ ಪತ್ರಕರ್ತರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಕೈಜೋಡಿಸುವಂತೆ ಮನವಿ ಮಾಡಿದರು. ಸುದಿಗೋಷ್ಠೀಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್ ಸುಬ್ಬಯ್ಯಕಟ್ಟೆ, ಸಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ವಕೀಲ ಥಾಮಸ್ ಡಿ.ಸೋಜ ಉಪಸ್ಥಿತರಿದ್ದರು.