ಗುವಾಹಟಿ: ರಾಜಕೀಯವಾಗಿ ಲಾಭ ಮಾಡಿಕೊಳ್ಳುವುದಕ್ಕಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳುತ್ತಿರುವ ಕಾಂಗ್ರೆಸ್ ಪಕ್ಷವು ನಾಚಿಕ ಇಲ್ಲದ್ದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಬುಧವಾರ ಹೇಳಿದ್ದಾರೆ.
ಜವಾಹರಲಾಲ್ ನೆಹರೂ ಕುಟುಂಬದವರ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ಯೋಜನೆಗಳನ್ನು ಹಾಗೂ ಸಂಸ್ಥೆಗಳನ್ನು ಆರಂಭಿಸಿರುವ ಕಾಂಗ್ರೆಸ್, ಅಂಬೇಡ್ಕರ್ ಅವರ ಹೆಸರಿನಲ್ಲಿ ಅಂತಹ ಯಾವ ಕೆಲಸವನ್ನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಶರ್ಮಾ, 'ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆ ಎಂಬುದೇ ಇಲ್ಲ. ತುರ್ತುಪರಿಸ್ಥಿತಿಯನ್ನು ಹೇರಿಕೆ ಮಾಡಿದ್ದ, ಸಂವಿಧಾನವನ್ನು ಅಮಾತಿನಲ್ಲಿಟ್ಟಿದ್ದ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದ ಕಾಂಗ್ರೆಸ್ ಇದೀಗ ಸಂವಿಧಾನದ ಹೆಸರಿನಲ್ಲಿ ಮೆರವಣಿಗೆ ನಡೆಸುತ್ತಿದೆ. ಆ ಪಕ್ಷದವರ ಲಜ್ಜೆಗೇಡುತನವನ್ನು ಇದು ತೋರುತ್ತದೆ' ಎಂದು ಗುಡುಗಿದ್ದಾರೆ.
'ಕಾಂಗ್ರೆಸ್ ಪಕ್ಷವು ಇಂದಿರಾ ಗಾಂಧಿ ಅವಾಸ್ ಯೋಜನೆ ಆರಂಭಿಸಿತು. ರಾಜೀವ್ ಗಾಂಧಿ ಹೆಸರಿನಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿತು. ದೇಶದ ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಿಗೆ ನೆಹರೂ ಅವರ ಹೆಸರಿಟ್ಟಿತು' ಎಂದಿರುವ ಶರ್ಮಾ, 'ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಒಂದಾದರೂ ಯೋಜನೆಯನ್ನು ಸಮರ್ಪಿಸಿದ್ದೀರಾ? ವಿಶ್ವವಿದ್ಯಾಲಯಗಳನ್ನು ಬಿಡಿ, ಒಂದು ಶಾಲೆಗಾದರೂ ಅವರ ಹೆಸರಿಟ್ಟಿದ್ದೀರಾ? ರಾಜೀವ್ ಭವನದಲ್ಲಿ ನಿನ್ನೆಗೂ ಮೊದಲು ಅಂಬೇಡ್ಕರ್ ಅವರ ಫೋಟೊ ಅಳವಡಿಸಲಾಗಿತ್ತು ಎಂಬುದನ್ನು ಯಾರಾದರೂ ಹೇಳಬಲ್ಲಿರಾ? ನಾನು 22 ವರ್ಷ ಕಾಂಗ್ರೆಸ್‌ನಲ್ಲಿದ್ದೆ. ರಾಜೀವ್ ಭವನದಲ್ಲಿ ಅಂಬೇಡ್ಕರ್ ಅವರ ಚಿತ್ರವನ್ನು ಎಂದೂ ನೋಡಿರಲಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಅಂಬೇಡ್ಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ, ದೇಶಕ್ಕೇನೂ ನಷ್ಟವಿಲ್ಲ ಎಂದು ಹೇಳಲಾಗಿತ್ತು' ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, 'ನೀವು ವಿಶ್ವದ ಎಲ್ಲರಿಗೂ 'ಭಾರತ ರತ್ನ' ನೀಡಿದ ನೀವು, ಅಂಬೇಡ್ಕರ್ ಅವರನ್ನು ಕಡೆಗಣಿಸಿದ್ದಿರಿ. ಆದರೆ, ಇಂದು ರಾಜಕೀಯ ಲಾಭಕ್ಕಾಗಿ ಅಂಬೇಡ್ಕರ್ ಸ್ಮರಣೆ, ಸಿದ್ಧಾಂತ, ತ್ಯಾಗವನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಅತ್ಯಂತ ಹೇಯ ಹಾಗೂ ನಾಚಿಕೆಗೇಡಿನ ಕೃತ್ಯ' ಎಂದು ಹೇಳಿದ್ದಾರೆ.