ಕಾಸರಗೋಡು: ಎರ್ನಾಕುಳಂ ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಏಜನ್ಸಿ ಮೂಲಕ ಇಸ್ರೇಲ್‍ನಲ್ಲಿ ಉದ್ಯೋಗ ವೀಸಾ ನೀಡುವುದಾಗಿ ಹಲವರಿಂದ ಹಣ ವಸೂಲಿ ಮಾಡಿ ವಂಚಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಂಗಳೂರು, ಉಡುಪಿ, ಮುಡಿಪು, ಮೂಡಬಿದ್ರಿಯ ಸಂತ್ರಸ್ತರ ಪರವಾಗಿ ಮಂಗಳೂರಿನ ಅರುಣ್‍ಪ್ರಕಾಶ್ ಕಾಸರಗೋಡಿನಲ್ಲಿ ನಡೆದ ಸಉದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಎರ್ನಾಕುಲಂನ ಕಡವತ್ರದಲ್ಲಿ ಕಾರ್ಯಾಚರಿಸುತ್ತಿರುವ ಸ್ಪೈಸ್ ಇಂಟರ್ ನ್ಯಾಷನಲ್ ಎಂಬ ಸಂಸ್ಥೆಯ ಮಂಗಳೂರಿನಲ್ಲಿರುವ ಏಜೆಂಟರಾದ ರೋಷನ್ ಮತ್ತು ಇಶಾಕ್ ಮೂಲಕ ಇಸ್ರೇಲ್ ನ 'ಕೊಹೆನ್ ಗ್ರೂಪ್' ಎಂಬ ಕಂಪನಿಯ ಫಾರ್ಮ್ ಹೌಸ್ ನಲ್ಲಿ ಕೆಲಸಕ್ಕಾಗಿ ಹತ್ತು ಮಂದಿಗೆ ವೀಸಾ ನೀಡಲಾಗಿತ್ತು. ಸಂದರ್ಶನ ನಡೆಸಿ ಒಪ್ಪಂದಕ್ಕೆ ಸಹಿ ಹಾಕಿಸಿ ಯುವಕರಿಂದ ತಲಾ 60 ಸಾವಿರ ರೂ. ಜತೆಗೆ ಪಾಸ್‍ಪೋರ್ಟ್, ಆಧಾರ್ ಕಾರ್ಡ್, ಪಾನ್‍ಕಾರ್ಡು, ಮತದಾರರ ಗುರುತಿನ ಚೀಟಿಯನ್ನೂ ಜತೆಗಿರಿಸಲಾಗಿತ್ತು. ಹಲವು ಸಮಯದ ನಂತರವೂ ವಿಸಾ ಕೈ ಸೇರಿರಲಿಲ್ಲ. ವಿಸಾದಲ್ಲಿ ನಮೂದಿಸಿದ ಸಂಸ್ಥೆ ಬಗ್ಗೆ ವಿಚಾರಿಸಿದಾಗ ಅಂತಹ ಯಾವುದೇ ಸಂಸ್ಥೆ ಅಲ್ಲಿ ಕಾರ್ಯಾಚರಿಸುತ್ತಿಲ್ಲ ಎಂಬ ಮಾಹಿತಿ ಲಭಿಸಿದಾಗ ವಿಸಾಕ್ಕಾಗಿ ಕೊಟ್ಟ ಹಣ ವಾಪಾಸುಮಾಡುವಂತೆ ಏಜನ್ಸಿಗಳನ್ನು ಸಂತ್ರಸ್ತರು ಒತ್ತಾಯಿಸಿದ್ದಾರೆ. ಹಣ ನೀಡಲು ದಿನ ನಿಗದಿಪಡಿಸುತ್ತಾ ಕಾಲವಿಳಂಬ ಮಾಡುವುದರ ಜತೆಗೆ ನೀಡಲಾದ ದಾಖಲೆ ವಾಪಾಸು ಮಾಡಲು ಮತ್ತೆ ಹಣ ನೀಡುವಂತೆ ಆಗ್ರಹಿಸಿದ್ದರು.
ಈ ಬಗ್ಗೆ ಸಂತ್ರಸ್ತರಲ್ಲಿ ಒಬ್ಬರಾದ ಶಾನ್ ಶೆಟ್ಟಿ ಎಂಬವರು ಉಡುಪಿ ಶಿರ್ವ ಪೆÇಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಪೆÇಲೀಸರು ಸೈಬರ್ ಕ್ರೈಮ್ ಎಂದು ತನಿಖೆ ಮುಂದುವರಿಸಿ ದಾಖಲೆ ವಾಪಾಸು ಕೊಡಿಸಿ, ವಿಸಾ ಏಜನ್ಸಿಯ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ಆದರೆ ಹಣ ನೀಡದೆ ಸತಾಯಿಸುತ್ತಿದ್ದು, ಈ ಬಗ್ಗೆ ನ್ಯಾಯ ದೊರಕಿಸಿಕೊಡುವಂತೆ ಅರುಣ್‍ಪ್ರಕಾಶ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರೋಹಿತ್ ಕುಮಾರ್ ಹಾಗೂ ಶ್ರವಣ್ ಶೆಟ್ಟಿ ಉಪಸ್ಥಿತರಿದ್ದರು.