ಕಾಸರಗೋಡು: ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಪತ್ನೀಕರಾಗಿ ಕಾಸರಗೋಡಿನ ಬೇಕಲಕೋಟೆಗೆ ಭೇಟಿ ನೀಡಿದ್ದಾರೆ. ಹೇಮಂತ್‍ಸೊರೇನ್ ಜೆಡ್ ಪ್ಲಸ್ ಭದ್ರತೆ ಹೊಂದಿರುವ ನೇತಾರರಾಗಿದ್ದು, ಈ ಹಿನ್ನೆಲೆಯಲ್ಲಿ ಬೇಕಲ ರೆಸಾರ್ಟ್ ಆಸುಪಾಸು ಭದ್ರತೆ ಚುರುಕುಗೊಳಿಸಲಾಗಿದೆ. ನಕ್ಸಲ್ ದಾಳಿ ಭೀತಿ ಎದುರಿಸುತ್ತಿರುವ ನೇತಾರರ ಪಟ್ಟಿಯಲ್ಲಿ ಹೇಮಂತ್ ಸೊರೇನ್ ಹೆಸರು ಒಳಗೊಂಡಿರುವ ಹಿನ್ನೆಲೆಯಲ್ಲಿ ಇವರಿಗೆ ಜೆಡ್ ಕ್ಯಾಟಗರಿ ಭದ್ರತೆ ಒದಗಿಸಲಾಗುತ್ತಿದೆ. ಜಿಲ್ಲಾ ಕ್‍ಐಂ ಬ್ರಾಂಚ್ ಡಿವೈಎಸ್‍ಪಿ ಟಿ. ಉತ್ತಮ್‍ದಾಸ್ ನೇತೃತ್ವದ ಪೊಲೀಸರ ತಂಡ ಝಾರ್ಖಂಡ್ ಮುಖ್ಯ ಮಂತ್ರಿಯ ಭದ್ರತಾ ಉಸ್ತುವಾರಿ ವಹಿಸಿಕೊಂಡಿದೆ.
ಮಂಗಳವಾರ ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಹೇಮಂತ್ ಸೊರೇನ್-ಕಲ್ಪನಾ ಸೊರೇನ್ ದಂಪತಿ ರಾತ್ರಿ 9ರ ವೇಳೆಗೆ ಪೊಲೀಸ್ ಭದ್ರತೆಯೊಂದಿಗೆ ರಸ್ತೆ ಹಾದಿ ಮೂಲಕ ಬೇಕಲ ಕೋಟೆಯ ತಾರಾ ಹೋಟೆಲ್ ತಾಜ್ ವಿವೆಂಟಾ ತಲುಪಿದ್ದಾರೆ. ಭರ್ಜರಿ ಗೆಲುವಿನೊಂದಿಗೆ ಝಾರ್ಖಂಡ್‍ನಲ್ಲಿ ಅಧಿಕಾರಕ್ಕೇರಿದ ಹೇಮಂತ್ ಸೊರೇನ್ ವಿಶ್ರಾಂತಿಗಾಗಿ ಕೇರಳಕ್ಕೆ ಆಗಮಿಸಿದ್ದಾರೆ. ಡಿ. 19ರ ವರೆಗೂ ಜಿಲ್ಲೆಯಲ್ಲಿರಲಿದ್ದು, ಬೇಕಲ ಕೋಟೆ ಹಾಗೂ ಇತರ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆನ್ನಲಾಗಿದೆ.
ಬೇಕಲ ಕೋಟೆ ವಿಐಪಿಗಳ ವಿಶ್ರಾಂತಿ ತಾಣವಾಗಿ ಬದಲಾಗುತ್ತಿದೆ. ಕರಾವಳಿಯ ಸೊಬಗಿನ ವೀಕ್ಷಣೆ ಜತೆಗೆ ಕೇರಳೀಯ ಶೈಲಿಯ ಖಾದ್ಯ ಪ್ರವಾಸಿಗರ ಪಾಳಿಗೆ ಸ್ವರ್ಗವಾಗಿ ಪರಿಣಮಿಸುತ್ತಿದೆ. ಈ ಹಿಂದೆ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಪ್ರಣಬ್‍ಮುಖರ್ಜಿ ಅವರು ತಮ್ಮ ಬಜೆಟ್ ಪೂರ್ವತಯಾರಿಗಾಗಿ ಬೇಕಲದ ತಾಜ್ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದರು. ಇಲ್ಲಿ ಒಂದು ವಾರ ಉಳಿದುಕೊಂಡು ವಾಪಸಾಗಿದ್ದರು.
ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕುಟುಂಬದ ಖಾಸಗಿ ಸಂದರ್ಶನ ಇದಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ತಮ್ಮ ಬಳಿ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ತಿಳಿಸಿದ್ದಾರೆ.