ಕಾಸರಗೋಡು : ಖರಾಸುರನಿಂದ ಪ್ರತಿಷ್ಠಾಪನೆಗೊಂಡಿರುವ ಅತ್ಯಂತ ಪ್ರಾಚೀನವಾದ ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನ: ನಿರ್ಮಾಣ ತ್ವರಿತಗತಿಯಲ್ಲಿ ನಡೆಯಲು ಮತ್ತು ಊರಿನ ಶ್ರೇಯಸ್ಸಿಗಾಗಿ ಡಿಸೆಂಬರ್ 28ಹಾಗೂ 29ರಂದು ಶಿವಶಕ್ತಿ ಮಹಾಯಾಗ ನಡೆಯಲಿರುವುದಾಗಿ ಯಾಗದ ಜನರಲ್ ಕಾನ್ವೀನರ್ ಪಿ.ಆರ್. ಸುನಿಲ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ನೆಲ್ಲಿಕಟ್ಟೆ-ಮುಳ್ಳೇರಿಯಾ ರಸ್ತೆಯ ನೆಲ್ಲಿಕಟ್ಟೆಯಿಂದ 3.5 ಕಿಮೀ ದೂರದಲ್ಲಿರುವ ಚಂದ್ರಂಪಾರ ಎಂಬ ಸ್ಥಳದಲ್ಲಿ ಅತ್ಯಂತ ಪ್ರಾಚೀನವಾದ ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವಿದ್ದು, 1500 ವರ್ಷಗಳ ಹಿಂದೆ ಖರಾಸುರನಿಂದ ಪ್ರತಿಷ್ಠಾಪಿಸಿರುವುದಾಗಿ ಐತಿಹ್ಯವಿದೆ.
ಕಲಾವಿದ ಪಿ.ಎಸ್. ಪುಣಿಂಚತ್ತಾಯ ಅವರನ್ನು ಆನುವಂಶಿಕ ಮೊಕ್ತೇಸರರಾಗಿರುವ ಸ್ಥಳೀಯ ಸಮಿತಿ ರಚಿಸಿ ದೇವಸ್ಥಾನದ ಪುನರುಜ್ಜೀವನ ನಡೆಸಲು ತೀರ್ಮಾನಿಸಲಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ಸಗುವ ನಿಟ್ಟಿನಲ್ಲಿ ಶಿವಶಕ್ತಿ ಮಹಾಯಾಗವನ್ನು ಆಯೋಜಿಸಲಾಗಿದೆ. 28ರಂದು ಬೆಳಗ್ಗೆ 6ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 7 ಗಂಟೆಯಿಂದ ಮಕ್ಕಳ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಡಿಸೆಂಬರ್ 29ರಂದು ಬೆಳಗ್ಗೆ ಗಣಪತಿ ಹೊಮದೊಂದಿಗೆ ಶಿವಶಕ್ತಿ ಮಹಾಯಾಗ ಆರಂಭವಾಗಲಿದೆ. ಬೆಳಗ್ಗೆ 10 ಗಂಟೆಗೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸ್ವಾಮೀಜಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಮಧುಸೂಧನ ಅಯ್ಯರ್ ಅಧ್ಯಕ್ಷತೆ ವಹಿಸುವರು. ಉದ್ಯಮಿ, ದಾನಿ ಕನ್ಯಾನ ಸದಾಶಿವ ಶೆಟ್ಟಿ ಕುಳೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಧ್ಯಾಹ್ನ 12 ಕ್ಕೆ ಯಾಗದ ಪೂರ್ಣಾಹುತಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ. ಸೀತಾರಾಮ ರಾವ್, ಕೋಶಾಧಿಕಾರಿ ರಾಮಚಂದ್ರ ಓರ್ಕೂಡ್ಲು, ಪ್ರಚಾರ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣನ್, ಉಪಾಧ್ಯಕ್ಷ ರವಿಶಂಕರ ವಾಲ್ತಾಜೆ, ಸಂಚಾಲಕ ಜಯರಾಮ್ ಕೋಟೂರು ಉಪಸ್ಥಿತರಿದ್ದರು.