ಲಾತೂರ್: ರಾತ್ರಿ ಸಮಯದಲ್ಲಿ ಓದುವ ವಿದ್ಯಾರ್ಥಿಗಳ ಬೇಸರ ನಿವಾರಿಸಿ, ಶಕ್ತಿ ತುಂಬಲು ಹಾಗೂ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡುವಂತೆ ಮಾಡಲು ಮಹಾರಾಷ್ಟ್ರದ ಲಾತೂರ್‌ನ ಸರ್ಕಾರಿ ಅನುದಾನಿತ ದಯಾನಂದ ಕಾಲೇಜಿನಲ್ಲಿ ಚಹಾ ಮತ್ತು ಕಾಫಿಯನ್ನು ನೀಡಲಾಗುತ್ತಿದೆ.
'12 ನೇ ತರಗತಿಯ ವಿದ್ಯಾರ್ಥಿಗಳು ಮುಂಬರುವ ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ.
ಓದುವ ಕೊಠಡಿಯಲ್ಲಿ ಹಲವು ತಾಸುಗಳ ಕಾಲ ಅಧ್ಯಯನಕ್ಕೆ ಕುಳಿತುಕೊಳ್ಳುತ್ತಾರೆ. ರಾತ್ರಿ ಸಮಯದಲ್ಲಿ ಕುಳಿತು ಓದಲು ಇರುವ ಸವಾಲುಗಳನ್ನು ಗುರುತಿಸಿ, ಅವರನ್ನು ಪ್ರೇರೇಪಿಸುವ ಉದ್ದೇಶದಿಂದ ಈ ಉಪಕ್ರಮ ಜಾರಿಗೆ ತರಲಾಗಿದೆ. ಚಹಾ ಅಥವಾ ಕಾಫಿ ಕುಡಿಯವ ಅವಧಿಯಲ್ಲಿ ವಿದ್ಯಾರ್ಥಿಗಳು ವಿರಾಮವನ್ನೂ ಪಡೆಯುತ್ತಾರೆ. ಇದರಿಂದ ಹೊಸ ಹುರುಪು ಅವರಲ್ಲಿ ಮೂಡಿ ಕಲಿಕೆ ಇನ್ನಷ್ಟು ಉತ್ತಮವಾಗಲಿದೆ' ಎಂದು ಕಾಲೇಜಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಕೈಗೊಂಡ ಕ್ರಮವಾಗಿದೆ. ಈ ಸಣ್ಣ ಉಪಾಯವು, ಓದುವ ಸಮಯದಲ್ಲಿ ವಿದ್ಯಾರ್ಥಿಗಳ ಬೇಸರವನ್ನು ದೂರಮಾಡಲಿದೆ' ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಶಿವಾಜಿ ಗಾಯಕ್‌ವಾಡ್ ತಿಳಿಸಿದ್ದಾರೆ.