ನಾಗ್ಪುರ: ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯ ವಿಚಾರ ಮಹಾರಾಷ್ಟ್ರ ವಿಧಾನಮಂಡಲದ ಎರಡೂ ಸದನಗಳಲ್ಲಿ ಬುಧವಾರ ಪ್ರತಿಧ್ವನಿಸಿತು.
ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷಗಳ ಸದಸ್ಯರು ಈ ವಿಚಾರ ಪ್ರಸ್ತಾಪಿಸಿದರು. ಕಲಾಪ ಆರಂಭಗೊಂಡಾಗ, ಕ್ರಿಯಾ ಲೋಪ ಎತ್ತಿದ ವಿರೋಧ ಪಕ್ಷದ ನಾಯಕ ಅಂಬಾದಾಸ್ ದನ್ವೆ, ಶಾ ಅವರ ಹೇಳಿಕೆ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಕೋರಿದರು.
ದನ್ವೆ ಅವರ ಸೂಚನೆಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ, 'ಸಂಸತ್‌ನಲ್ಲಿನ ವಿಚಾರಗಳ ಕುರಿತು ರಾಜ್ಯದ ವಿಧಾನಪರಿಷತ್‌ನಲ್ಲಿ ಚರ್ಚೆ ಮಾಡುವಂತಿಲ್ಲ. ಈ ವಿಚಾರವಾಗಿ ವಿರೋಧ ಪಕ್ಷಗಳ ಸದಸ್ಯರು ರಾಜಕೀಯ ಮಾಡುತ್ತಿವೆ' ಎಂದು ಉಪ ಸಭಾಪತಿ ನೀಲಂ ಗೋರ್‍ಹೆ ಹೇಳಿದರು.
ಇದನ್ನು ಪ್ರತಿಭಟಿಸಿ, ಸಭಾಪತಿ ಪೀಠದ ಬಳಿ ಜಮಾಯಿಸಿದ ವಿರೋಧ ಪಕ್ಷಗಳ ಮೈತ್ರಿಕೂಟ 'ಮಹಾ ವಿಕಾಸ್ ಅಘಾಡಿ' (ಎಂವಿಎ) ಸದಸ್ಯರು, ಶಾ ಹೇಳಿಕೆ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಘೋಷಣೆಗಳನ್ನು ಕೂಗಿದರಲ್ಲದೇ, ನಂತರ ಸದನದಿಂದ ಹೊರನಡೆದರು.
ವಿಧಾನಸಭೆಯಲ್ಲಿಯೂ ಪ್ರಸ್ತಾಪ: ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕ ನಿತಿನ್ ರಾವುತ್ ಕೂಡ, ಈ ವಿಷಯ ಪ್ರಸ್ತಾಪಿಸಿ, ಚರ್ಚೆಗೆ ಅವಕಾಶ ಕೋರಿದರು.
ಸಚಿವ, ಬಿಜೆಪಿಯ ಆಶಿಶ್ ಶೇಲಾರ್ ಇದಕ್ಕೆ ಆಕ್ಷೇಪಿಸಿದರು. 'ರಾಜ್ಯಸಭೆ ಕಲಾಪ ಕುರಿತಂತೆ ವಿಧಾನಸಭೆಯಲ್ಲಿ ಹೇಗೆ ಚರ್ಚೆ ಮಾಡುತ್ತೀರಿ' ಎಂದು ಪ್ರಶ್ನಿಸಿದ ಶೇಲಾರ್, ರಾವುತ್ ಅವರ ಬೇಡಿಕೆಯನ್ನು ಕಡತದಿಂದ ತೆಗೆದು ಹಾಕುವಂತೆ ಮನವಿ ಮಾಡಿದರು.