ತಿರುವನಂತಪುರಂ: ಕೇರಳದ ಕಾಸರಗೋಡಿನ ಪೆರಿಯದಲ್ಲಿ 2019ರಲ್ಲಿ ನಡೆದ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಪ್ರಕರಣಕ್ಕೂ ಸಿಪಿಐ (ಎಂ) ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸಿಪಿಐ (ಎಂ) ಕೇಂದ್ರ ಸಮಿತಿ ಸದಸ್ಯ ಎ.ಕೆ. ಬಾಲನ್ ಭಾನುವಾರ ತಿಳಿಸಿದರು.
ಈ ಘಟನೆಗೂ ಮತ್ತು ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪುನರುಚ್ಚರಿಸಿದರು.
ಘಟನೆ ನಡೆದಾಗ ಪಕ್ಷದ ಉನ್ನತ ನಾಯಕರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಅವರು ಹೇಳಿದರು.
ಪೆರಿಯದಲ್ಲಿ 2019ರಲ್ಲಿ ನಡೆದ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಪ್ರಕರಣದ 14 ಮಂದಿ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಕೊಚ್ಚಿಯ ಸಿಬಿಐ ವಿಶೇಷ ನ್ಯಾಯಾಲಯ ನಿನ್ನೆ (ಡಿ.28) ತೀರ್ಪು ಪ್ರಕಟಿಸಿದೆ.
ಪ್ರಕರಣದ ಇತರ 10 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. 14 ಅಪರಾಧಿಗಳ ಶಿಕ್ಷೆಯನ್ನು ಜನವರಿ 3,2025ರಂದು ಪ್ರಕಟಿಸಲಿದೆ. ಕಳೆದ 6 ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.
ಸಿಪಿಐ(ಎಂ) ಮುಖಂಡರಾದ ಮಾಜಿ ಶಾಸಕ ಹಾಗೂ ಸಿಪಿಎಂ ಜಿಲ್ಲಾ ನಾಯಕ ಕೆ.ವಿ.ಕುಂಞಿರಾಮನ್, ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಪೆರಿಯ ಸ್ಥಳೀಯ ಸಮಿತಿ ಮಾಜಿ ಸದಸ್ಯ ಎ.ಪೀತಾಂಬರನ್, ಪಕ್ಕಂ ಸ್ಥಳೀಯ ಸಮಿತಿಯ ಮಾಜಿ ಕಾರ್ಯದರ್ಶಿ ರಾಘವನ್ ವೆಲುತ್ತೋಳಿ, ಸಾಜಿ ಜಾರ್ಜ್, ಕೆ.ಎಂ ಸುರೇಶ್, ಕೆ. ಅನಿಲ್‌ಕುಮಾರ್, ಜಿಜಿನ್, ಶ್ರೀರಾಗ್, ಅಶ್ವಿನ್, ಸುಧೀಶ್, ರೆಂಜಿತ್, ಸುರೇಂದ್ರನ್ ಅವರನ್ನು ದೋಷಿಗಳೆಂದು ನ್ಯಾಯಾಲಯ ಘೋಷಿಸಿದೆ.
ಫೆಬ್ರವರಿ 17, 2019ರಂದು ಕಾಸರಗೋಡಿನ ಪೆರಿಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ 19 ವರ್ಷದ ಕೃಪೇಶ್ ಮತ್ತು 24 ವರ್ಷದ ಶರತ್ ಲಾಲ್ ಅವರ ಹತ್ಯೆ ನಡೆದಿತ್ತು. ಸಿಪಿಐ (ಎಂ) ಸದಸ್ಯರು ಈ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.