ನವದೆಹಲಿ: ಭಾರತದಲ್ಲಿರುವ ಒಟ್ಟು ಅರಣ್ಯ ಪ್ರದೇಶ ಹಾಗೂ ಹಸಿರು ಹೊದಿಕೆಯ ವಿಸ್ತೀರ್ಣವು 2021ರಿಂದ ಈಚೆಗೆ ಸುಮಾರು 1,445 ಚದರ ಕಿ.ಮೀನಷ್ಟು ಹೆಚ್ಚಾಗಿದೆ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರವು ವರದಿ ಬಿಡುಗಡೆ ಮಾಡಿತ್ತು. ಈ ವರದಿಯನ್ನು ಪರಿಸರ ಕಾರ್ಯಕರ್ತರು ತೀವ್ರವಾಗಿ ವಿರೋಧಿಸಿದ್ದಾರೆ.
ಕೇಂದ್ರ ಸರ್ಕಾರವು 'ಉತ್ಪ್ರೇಕ್ಷಿತ' ಸಂಖ್ಯೆಗಳನ್ನು ನೀಡಿದೆ ಎಂದು ಆರೋಪಿಸಿದ್ದಾರೆ.
'ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ 2023' ವರದಿಯನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿತ್ತು.
'ಬಿದಿರು ಮೆಳೆಗಳು, ತೆಂಗಿನ ತೋಟ ಮತ್ತು ಇತರ ತೋಟಗಳನ್ನು ಅರಣ್ಯ ಪ್ರದೇಶವೆಂದು ಸೇರಿಸಲಾಗಿದೆ. ವಾಸ್ತವದಲ್ಲಿ 156 ಚದರ ಕಿ.ಮೀನಷ್ಟೇ ಅರಣ್ಯ ಪ್ರದೇಶವು ಹೆಚ್ಚಳವಾಗಿದೆ. ಇದರಲ್ಲಿ ಸುಮಾರು 149 ಚದರ ಕಿ.ಮೀನಷ್ಟು ಪ್ರದೇಶವು ಸರ್ಕಾರವು ಗೊತ್ತು ಮಾಡಿದ ಅಧಿಕೃತ ಅರಣ್ಯ ಪ್ರದೇಶದ (ಆರ್‌ಎಫ್‌ಎ) ಹೊರಗೆ ಹೆಚ್ಚಳವಾಗಿದೆ' ಎಂದಿದ್ದಾರೆ.
'ಉತ್ಪ್ರೇಕ್ಷಿತ ಸಂಖ್ಯೆಗಳಿರುವ ಮತ್ತೊಂದು ಸುಳ್ಳಿನ ವರದಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ' ಎಂದು ಕೇರಳದ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪ್ರಕೃತಿ ಶ್ರೀವಾಸ್ತವ, ಪರಿಸರ ರಕ್ಷಣೆ ಸಂಶೋಧಕಿ ಕೃತಿಕಾ ಸಂಪತ್ ಹಾಗೂ ವನ್ಯಜೀವಿ ರಾಷ್ಟ್ರೀಯ ಮಂಡಳಿಯ ಮಾಜಿ ಸದಸ್ಯೆ ಪ್ರೇರಣಾ ಸಿಂಗ್ ಬಿಂದ್ರಾ ಅವರು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
'ಹಸಿರು ಹೊದಿಕೆಯು ಅಧಿಕವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ಮುಖ್ಯ ಕಾರಣ, ರಬ್ಬರ್, ನೀಲಗಿರಿ, ಅಕೇಷಿಯಾ, ಮಾವಿನ ತೋಪು, ಅಡಿಕೆ ಮತ್ತು ತೆಂಗಿನ ಮರಗಳು, ಕಾಫಿ ಹಾಗೂ ಟೀ ಪ್ಲ್ಯಾಂಟೇಷನ್‌ಗಳಲ್ಲಿ ನೆರಳಿಗಾಗಿಯೇ ನೆಡುವ ಮರಗಳ ಕಾರಣದಿಂದಲೂ ಹಸಿರು ಹೊದಿಕೆ ಏರಿಕೆಯಾಗಿದೆ' ಎಂದಿದ್ದಾರೆ.