ನವದೆಹಲಿ: ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಎಎಪಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
70 ಸಂಖ್ಯಾಬಲ ಹೊಂದಿರುವ ದೆಹಲಿ ವಿಧಾನಸಭಾ ಚುನಾವಣೆ 2025ರ ಫೆಬ್ರುವರಿಯಲ್ಲಿ ನಡೆಯಲಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ದೆಹಲಿಯ ಆಡಳಿತಾರೂಢ ಎಎಪಿ ಪಕ್ಷದ ಶಾಸಕರೊಬ್ಬರು ಗ್ಯಾಂಗ್‌ಸ್ಟರ್‌ಗಳ ನೆರವಿನಿಂದ ಹಣ ಸುಲಿಗೆಯಲ್ಲಿ ತೊಡಗಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪ ಕುರಿತು ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ನಿಜವಾಗಿಯೂ ಗ್ಯಾಂಗ್‌ಸ್ಟರ್‌ಗಳು ಇದ್ದರೆ ಬಂಧಿಸುವಂತೆ ಗೃಹ ಸಚಿವ ಅಮಿತ್ ಶಾ ಅವರಿಗೆ ಸವಾಲು ಹಾಕುತ್ತೇನೆ ಎಂದು ಕೇಜ್ರಿವಾಲ್ ಕಿಡಿಕಾರಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಮತ್ತು ದೆಹಲಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಗ್ಯಾಂಗ್‌ಸ್ಟರ್‌ಗಳೊಂದಿಗೆ ಎಎಪಿ ಶಾಸಕರೊಬ್ಬರು ಸಂಭಾಷಣೆ ನಡೆಸಿರುವ ಆಡಿಯೊ ಕ್ಲಿಪ್ ಅನ್ನು ಬಿಡುಗಡೆ ಮಾಡಿದ್ದರು.
'ಜನರನ್ನು ಬೆದರಿಸಿ ಹಣ ವಸೂಲಿ ಮಾಡುವಲ್ಲಿ ಎಎಪಿ ತೊಡಗಿದೆ. ಕೂಡಲೇ ಭ್ರಷ್ಟ ಶಾಸಕರ ರಾಜೀನಾಮೆ ಪಡೆಯಬೇಕು' ಎಂದು ಮುಖ್ಯಮಂತ್ರಿ ಆತಿಶಿ ಮತ್ತು ಮಾಜಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನು ಭಾಟಿಯಾ ಒತ್ತಾಯಿಸಿದ್ದರು.
ಶಾಸಕರ ರಾಜೀನಾಮೆ ಪಡೆಯದಿದ್ದರೆ ಪಕ್ಷ ಮತ್ತು ಮುಖಂಡರಿಗೆ ಸುಲಿಗೆ ಹಣ ಹೋಗುತ್ತಿದೆ ಎಂದು ಭಾವಿಸಲಾಗುವುದು ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದರು.