ನಾಗ್ಪುರ: 'ಯುಪಿಎ ಸರ್ಕಾರವೇ ಪಟ್ಟಿ ಮಾಡಿದ್ದ ನಕ್ಸಲ್ ಚಳವಳಿಯಲ್ಲಿ ಗುರುತಿಸಿಕೊಂಡಿರುವ ಕೆಲವು ಮುಂಚೂಣಿ ಸಂಘಟನೆಗಳು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೈಗೊಂಡ ಭಾರತ ಜೋಡೊ ಯಾತ್ರೆಯಲ್ಲಿ ಭಾಗವಹಿಸಿದ್ದವು' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಶನಿವಾರ ಪುನರುಚ್ಚರಿಸಿದ್ದಾರೆ.
ಒಂದು ವಾರ ನಡೆದ ಮಹಾರಾಷ್ಟ್ರದ ಚಳಿಗಾಲದ ಅಧಿವೇಶನ ಪೂರ್ಣಗೊಂಡ ಸಲುವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
'ಇದನ್ನು ನಾನು ಹೇಳುತ್ತಿಲ್ಲ. ಬದಲಿಗೆ ಇದನ್ನು ಯುಪಿಎ ಸರ್ಕಾರವೇ 2014ಕ್ಕೂ ಮೊದಲು ಸಿದ್ಧಪಡಿಸಿದ್ದ ವರದಿಗಳು ಹೇಳುತ್ತಿವೆ. ಆ ಸರ್ಕಾರ ಪಟ್ಟಿ ಮಾಡಿದ್ದ 180 ಮುಂಚೂಣಿ ಸಂಘಟನೆಗಳ ಪೈಕಿ 40 ಸಂಘಟನೆಗಳು ಯಾತ್ರೆಯಲ್ಲಿ ಭಾಗವಹಿಸಿದ್ದವು' ಎಂದಿದ್ದಾರೆ. ಕಲಾಪದ ವೇಳೆಯೂ ದೇವೇಂದ್ರ ಫಡಣವೀಸ್ ಅವರು ಇದೇ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಯಾತ್ರೆಯ ಸಂಚಾಲಕರಾಗಿದ್ದ ಯೋಗೇಂದ್ರ ಯಾದವ್ ಅವರು, ಭಾರತ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ನಕ್ಸಲ್ ಚಳವಳಿಯ ಮುಂಚೂಣಿ ಸಂಘಟನೆಗಳ ಹೆಸರನ್ನು ಬಹಿರಂಗಪಡಿಸುವಂತೆ ಶನಿವಾರ ಸವಾಲೆಸೆದರು.
ಯೋಗೇಂದ್ರ ಯಾದವ್
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 'ನಾವು ಮಹಾತ್ಮ ಗಾಂಧಿ ಅವರ ಅನುಯಾಯಿಗಳು. ನಮಗೆ ಹೇಗೆ ನಕ್ಸಲರು ಎಂದು ಹಣೆಪಟ್ಟಿ ಕಟ್ಟುತ್ತೀರಿ' ಎಂದು ಪ್ರಶ್ನಿಸಿದ್ದಾರೆ.