HEALTH TIPS

ಕೇರಳದಲ್ಲಿದೆ 'ಮೆಣಸಿನಕಾಯಿ ಗ್ರಾಮ'

ತಿರುವನಂತಪುರ: ಕೇರಳದ ಕೊಟ್ಟಾಯಂ ಜಿಲ್ಲೆಯ ತಿರುವಾರ್ಪ್‌ ಗ್ರಾಮಕ್ಕೀಗ 'ಮುಳಗು ಗ್ರಾಮ' (ಮೆಣಸಿನಕಾಯಿ) ಎಂಬ ಹೆಸರು ಅನ್ವರ್ಥವಾಗಿದೆ. ಕಲಬೆರಕೆ ಮೆಣಸಿನಪುಡಿಯಿಂದ ಬೇಸತ್ತಿರುವ ಜನರು ನೈಸರ್ಗಿಕವಾದ, ಆರೋಗ್ಯಪೂರ್ಣ ಮೆಣಸಿನಪುಡಿ ತಯಾರಿಸಲು ಯೋಜನೆ ರೂ‍ಪಿಸಿದ್ದಾರೆ.

ಇದರ ಮೊದಲ ಹಂತವಾಗಿ ಮೆಣಸಿನಕಾಯಿ ಕೃಷಿಯನ್ನು ಆರಂಭಿಸಿದ್ದಾರೆ. ವಿಶೇಷವೇನೆಂದರೆ, ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮೆಣಸಿನಕಾಯಿ ಕೃಷಿ ಮಾಡಲಾಗುತ್ತಿದ್ದು, ತಿರುವಾರ್ಪ್‌ ಗ್ರಾಮ ಪಂಚಾಯಿತಿಯ ಈ ಕಾರ್ಯ ದೇಶಕ್ಕೆ ಮಾದರಿ ಎನಿಸಿದೆ.

2.5 ಎಕರೆ ಬರಡು ಭೂಮಿಯನ್ನು ಹದಮಾಡಿ ಕೃಷಿ ಮಾಡಲಾಗುತ್ತಿದೆ. 16ನೇ ಹಣಕಾಸಿನ ಆಯೋಗದ ಸದಸ್ಯರು ಸೋಮವಾರದಿಂದ ಮೂರು ದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ. ಮೊದಲ ದಿನವೇ ಆಯೋಗದ ಸದಸ್ಯರು ಇಲ್ಲಿಗೆ ಆಗಮಿಸಲಿದ್ದು, ಅವರಿಗೆ ಗ್ರಾಮದ ಯಶಸ್ಸಿನ ಕಥೆಯನ್ನು ಹೇಳಲು ತಿರುವಾರ್ಪ್‌ ಪಂಚಾಯಿತಿಯು ಸಿದ್ಧತೆ ನಡೆಸಿದೆ.

ಕೊಟ್ಟಾಯಂ ನಗರಕ್ಕೆ ಹೊಂದಿಕೊಂಡಿರುವಂತೆ ತಿರುವಾರ್ಪ್‌ ಗ್ರಾಮವಿದೆ. 2024ರ ಆರಂಭದಲ್ಲಿ ಗ್ರಾಮ ಪಂಚಾಯಿತಿಯು 'ಮುಳಗು ಯೋಜನೆ'ಯನ್ನು ಆರಂಭಿಸಿತು. ಮೊದಲಿಗೆ ಗ್ರಾಮದಲ್ಲಿನ ಬರಡು ಭೂಮಿಗಳನ್ನು ಗುರುತಿಸಲಾಯಿತು. ನಂತರ, ಗ್ರಾಮದ ಬೇರೆ ಬೇರೆ ಜಾಗದಲ್ಲಿರುವ ಐದು ಪುಟ್ಟ ಪುಟ್ಟ ಬರಡು ಜಮೀನನ್ನು ಈ ಯೋಜನೆಗಾಗಿ ಬಳಸಿಕೊಳ್ಳಲು ನಿರ್ಧರಿಸಲಾಯಿತು.

ಈ ಐದು ಜಮೀನುಗಳಲ್ಲಿ ನಾಲ್ಕರಲ್ಲಿ ಮಹಿಳೆಯರ ಗುಂಪು ಕೃಷಿ ಮಾಡುತ್ತಿದ್ದರೆ, ಒಂದು ಕಡೆಯಲ್ಲಿ ಪುರುಷರ ಗುಂಪು ಕೃಷಿ ಮಾಡುತ್ತಿದೆ. ಈ ಯೋಜನೆಯಲ್ಲಿ ಈ ಗ್ರಾಮದ ಒಟ್ಟು 70 ನರೇಗಾ ಕಾರ್ಮಿಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇಷ್ಟೇ ಅಲ್ಲದೇ, ಹಣಕಾಸು ಆಯೋಗದಿಂದ ಅನುದಾನ ಪಡೆದುಕೊಂಡು ಅಭಿವೃದ್ಧಿಪಡಿಸಿದ ವಿವಿಧ ಕಾರ್ಯಕ್ರಮಗಳನ್ನೂ ಆಯೋಗದ ಸದಸ್ಯರಿಗೆ ತೋರಿಸಲು ಪಂಚಾಯಿತಿ ತುದಿಗಾಲಿನಲ್ಲಿದೆ. ಕಸ ಸಂಸ್ಕರಣೆ ಘಟಕವೊಂದನ್ನು ಪಂಚಾಯಿತಿ ಸ್ಥಾಪಿಸಿದೆ. ನರ್ಸರಿ ಯೋಜನೆಯಡಿ ಗ್ರಾಮದ 8 ಸಾವಿರಕ್ಕೂ ಅಧಿಕ ಮನೆಗಳಲ್ಲಿ ತೆಂಗಿನ ಸಸಿಗಳನ್ನು ನೆಡಲಾಗಿದೆ. ಜೊತೆಗೆ, ಹಾಲು ಉತ್ಪನ್ನ ತಯಾರಿಕೆ ಕೇಂದ್ರ ಹಾಗೂ ಮಹಿಳೆಯರಿಗಾಗಿ ಕ್ಷೇಮ ಕೇಂದ್ರವೊಂದನ್ನೂ ಪಂಚಾಯಿತಿ ಸ್ಥಾಪಿಸಿದೆ.

ಕೇರಳ ಸರ್ಕಾರದ 'ಕುಟುಂಬಶ್ರೀ' ಕಾರ್ಯಕ್ರಮದಡಿ ಪತ್ತನಂತಿಟ್ಟ ಜಿಲ್ಲೆಯಾದ್ಯಂತ 'ಮುಳಗು ಯೋಜನೆ'ಯನ್ನು ಜಾರಿ ಮಾಡಲಾಗಿತ್ತು. 'ಪತ್ತನಂತಿಟ್ಟ ರೆಡ್‌ ಚಿಲ್ಲೀಸ್‌' ಬ್ರ್ಯಾಂಡ್‌ನಲ್ಲಿ ಈ ಮೆಣಸಿನಪುಡಿಯು ಕಳೆದ ವರ್ಷವೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

 ನರೇಗಾ ಕಾರ್ಮಿಕರು ತಾವು ಬೆಳೆದ ಮೆಣಸಿನಕಾಯಿಯನ್ನು ತೋರಿಸಿದರು

'ತಿರುವಾರ್ಪ್‌ ಬ್ರ್ಯಾಂಡ್‌'ನಲ್ಲಿ ಪುಡಿಮಾರಾಟ'

ಪರಿಣಾಮಕಾರಿಯಾದ ಅಧಿಕಾರ ವಿಕೇಂದ್ರೀಕರಣದಿಂದಾಗುವ ಲಾಭಗಳನ್ನು ವಿವರಿಸಲು ನಮ್ಮ ಪಂಚಾಯಿತಿ ಉತ್ತಮ ಉದಾಹರಣೆಯಾಗಬಲ್ಲದು. 'ಮುಳಗು ಯೋಜನೆ'ಯನ್ನೇ ತೆಗೆದುಕೊಳ್ಳಿ ಮೆಣಸಿನಕಾಯಿ ಕೃಷಿ ಆರಂಭಿಸಿದಾಗಿನಿಂದಲೂ ಉತ್ತಮ ಇಳುವರಿ ಬಂದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿಯೂ ನಾವು ಇಲ್ಲಿ ಬೆಳೆದ ಮೆಣಸಿನಕಾಯಿಗಳನ್ನು ಮಾರಾಟ ಮಾಡುತ್ತಿದ್ದೇವೆ. ಮುಂದಿನ ವರ್ಷ ಪುಡಿ ತಯಾರಿಕೆಗಾಗಿ ಡ್ರಯರ್‌ಗಳು ಗ್ರೈಂಡರ್‌ಗಳನ್ನು ಖರೀದಿಸುತ್ತೇವೆ. ಈ ಮೆಣಸಿನ ಪುಡಿಯು 'ತಿರುವಾರ್ಪ್‌ ಬ್ರ್ಯಾಂಡ್‌' ಅಡಿಯಲ್ಲಿ ಮಾರುಕಟ್ಟೆಗೆ ಬರಲಿದೆ.

- ಅಜಯನ್‌ ಕೆ. ಮೆನನ್‌ ಅಧ್ಯಕ್ಷ ತಿರುವಾರ್ಪ್‌ ಗ್ರಾಮ ಪಂಚಾಯಿತಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries