ತಿರುವನಂತಪುರ: ಶಬರಿಮಲೆಯಲ್ಲಿ ವಿಶೇಷ ಉತ್ಸವಗಳಿಗೆ ಮಾತ್ರ ತಂಗಅಂಗಿ(ವಿಶೇಷ ವಸ್ತ್ರಾಭರಣ) ಅರ್ಪಿಸುವ ಭಕ್ತರಿಂದ ಹೆಚ್ಚಿನ ಮೊತ್ತವನ್ನು ಕಾಣಿಕೆಯಾಗಿ ವಸೂಲಿ ಮಾಡುವ ನಿರ್ಧಾರದ ಹಿಂದೆ ದೇವಸ್ವಂ ಮಂಡಳಿಯ ಹಣದ ದುರಾಸೆ ಅಡಗಿದೆ ಎಂದು ಕೇರಳ ದೇವಸ್ಥಾನ ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಸ್.ನಾರಾಯಣ್ ಟೀಕೆ ವ್ಯಕ್ತಪಡಿಸಿದ್ದಾರೆ.
ಯಾವುದೇ ಅಡೆತಡೆಯಿಲ್ಲದೆ ಭಕ್ತಾದಿಗಳಿಗೆ ದೇವಸ್ಥಾನದ ಪೂಜೆಯನ್ನು ನೆರವೇರಿಸಲು ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಿಕೊಡುವ ಜವಾಬ್ದಾರಿ ದೇವಸ್ವಂ ಮಂಡಳಿಗಳ ಮೇಲಿದೆ. ಆದರೆ ದೇವಸ್ಥಾನಗಳನ್ನು ವಾಣಿಜ್ಯ ಕೇಂದ್ರಗಳನ್ನಾಗಿಸುವುದು ಹೇಗೆ ಎಂಬ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿರುವುದು ಖಂಡನಾರ್ಹ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ. ಪೂರ್ವಜರಿಂದ ವೈಜ್ಞಾನಿಕವಾಗಿ ರಚಿತವಾದ ಆಚರಣೆಗಳನ್ನು ಬುಡಮೇಲು ಮಾಡುವುದು ಸಾಮಾನ್ಯ ಎಂಬುದಕ್ಕೆ ತಂಗಯಂಗಿಯ ಹೆಸರಲ್ಲಿ ಹಣ ವಸೂಲಿಗೆ ಮುಂದಾಗಿರುವುದು ಇತ್ತೀಚಿನ ಉದಾಹರಣೆ.
ಭಕ್ತರ ಬೇಡಿಕೆಗೆ ಮಣಿದು ಗುರುವಾಯೂರು ಏಕಾದಶಿನಂದು ಉದಯಸ್ತಮಾನ ಪೂಜೆ ನಡೆಸದಿರಲು ಗುರುವಾಯೂರು ದೇವಸ್ವಂ ಮಂಡಳಿ ನಿರ್ಧರಿಸಿದೆ. ಇದು ಆತಂಕಕಾರಿಯಾಗಿದೆ. ಆಚಾರ-ವಿಚಾರಗಳ ಹಿರಿಮೆಯನ್ನು ಅರಿಯದ ಯಾವುದೇ ಭಕ್ತರ ಕೋರಿಕೆಯ ಮೇರೆಗೆ ದೇವಸ್ವಂ ಮಂಡಳಿಗಳು ಎಂತಹ ಅಪಾಯಕಾರಿ ಬದಲಾವಣೆಗಳನ್ನು ತರುತ್ತಿವೆ ಎಂದು ಹೇಳಲಾಗದು.
ದೇವಸ್ವಂ ಮಂಡಳಿಗಳು ದೇವಸ್ಥಾನದ ಆಚಾರ-ವಿಚಾರಗಳ ಉಲ್ಲಂಘನೆ ವಿರುದ್ಧ ನ್ಯಾಯಾಲಯದ ಮೊರೆ ಹೋಗಬೇಕಾದ ಅವಾಂತರ ಸೃಷ್ಟಿಸುತ್ತಿವೆ. ಇದು ದೇವಸ್ಥಾನಗಳ ಮೇಲಿನ ನಂಬಿಕೆಯನ್ನು ನಾಶಮಾಡಲು ನಾಸ್ತಿಕ ರಾಜಕಾರಣದ ಉದ್ದೇಶಪೂರ್ವಕ ನಡೆ ಎಂದವರು ಕಿಡಿಕಾರಿದ್ದಾರೆ.
ಶಬರಿಮಲೆಯನ್ನು ಆಧುನಿಕ ರೈಲು ಸಾರಿಗೆ ಸೌಲಭ್ಯವಿರುವ ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸಿದರೆ ಆರ್ಥಿಕ ಲಾಭ ಮತ್ತು ನಂಬಿಕೆ ಕಳೆದುಕೊಳ್ಳುವುದು ಸರ್ಕಾರದ ಉದ್ದೇಶ. ಶತಮಾನಗಳಷ್ಟು ಹಳೆಯದಾದ ಮತ್ತು ವೈಭವಯುತವಾದ ಪರಿಪಾವನ ಯಾತ್ರಾ ಕೇಂದ್ರವನ್ನು ಈ ವ್ಯಾಪಾರ ಕುತಂತ್ರದಿಂದ ರಕ್ಷಿಸುವುದು ಹಿಂದೂ ಸಮುದಾಯದ ಕರ್ತವ್ಯವಾಗಿದೆ. ಇಂತಹ ಹಿಂದೂ ವಿರೋಧಿ ಧೋರಣೆಯಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ದೇವಸ್ಥಾನ ಸಂರಕ್ಷಣಾ ಸಮಿತಿ ಆಗ್ರಹಿಸಿದೆ.