ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ ತಮ್ಮ ಸಚಿವ ಸಂಪುಟ ಸಚಿವರು ಹಾಗೂ ಬಿಜೆಪಿ ಸಂಸದರೊಂದಿಗೆ 'ದಿ ಸಾಬರಮತಿ ರಿಪೋರ್ಟ್' ಚಲನಚಿತ್ರ ವೀಕ್ಷಿಸಿದರು.
ನಿನ್ನೆ ಸಂಸತ್ತಿನ ಗ್ರಂಥಾಲಯ ಕಟ್ಟಡದ ಬಾಲಯೋಗಿ ಆಡಿಟೋರಿಯಂನಲ್ಲಿ ಗೋಧ್ರಾ ರೈಲು ಹತ್ಯಾಕಾಂಡ ಆಧರಿಸಿದ 'ದಿ ಸಬರಮತಿ ರಿಪೋರ್ಟ್' ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.
ಈ ಹಿಂದೆ ಪ್ರಧಾನಿ ಮೋದಿ ಅವರು 59 ಜನರ ಸಾವಿಗೆ ಕಾರಣವಾದ ಗೋಧ್ರಾ ರೈಲು ದಹನದ ಘಟನೆಯ ಸತ್ಯಗಳನ್ನು ಬಿಚ್ಚಿಟ್ಟಿದ್ದಕ್ಕಾಗಿ ಚಿತ್ರವನ್ನು ಶ್ಲಾಘಿಸಿದ್ದರು.
ನಿನ್ನೆ ಆಡಳಿತಾರೂಢ ಮೈತ್ರಿಕೂಟದ ಸಂಸದರು, ತಮ್ಮ ಸಂಪುಟದ ಹಲವು ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದಿ ಸಬರಮತಿ ಚಲನಚಿತ್ರವನ್ನು ವೀಕ್ಷಿಸಿದರು.
ಚಿತ್ರ ವೀಕ್ಷಿಸಿದ ಬಳಿಕ ಮಾತನಾಡಿದ ಹಿರಿಯ ನಟ ಜೀತೇಂದ್ರ ಮತ್ತು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ರಾಶಿ ಖನ್ನಾ ಸೇರಿದಂತೆ ಕೆಲವು ಪ್ರೇಕ್ಷಕರು, ಪ್ರಧಾನಿಯಾದ ನಂತರ ತಾವು ವೀಕ್ಷಿಸಿದ ಮೊದಲ ಚಿತ್ರ ಇದಾಗಿದೆ ಎಂದು ಮೋದಿ ಹೇಳಿರುವುದಾಗಿ ತಿಳಿಸಿದರು.
ಮೋದಿ ಅವರೊಂದಿಗೆ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತು ಭಾರತೀಯ ಜನತಾ ಪಕ್ಷದ ಮಿತ್ರಪಕ್ಷ ಜಿತನ್ ರಾಮ್ ಮಾಂಝಿ ಸೇರಿದಂತೆ ಇತರರು ಸಿನಿಮಾವನ್ನು ವೀಕ್ಷಿಸಿದರು.
ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ನಟಿಸಿರುವ ವಿಕ್ರಾಂತ್ ಮಾಸ್ಸೆ ಅವರು, ಮೋದಿಯವರೊಂದಿಗೆ ಸಿನಿಮಾ ನೋಡಿದ್ದು ಪದಗಳಲ್ಲಿ ಹೇಳಲಾಗದ ವಿಭಿನ್ನ ಅನುಭವ ನೀಡಿದೆ ಎಂದರು.