ಒಟ್ಟಾವ: ಹ್ಯಾಲಿಫ್ಯಾಕ್ಸ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ವೇಳೆ ತಾಂತ್ರಿಕ ದೋಷದಿಂದ ಏರ್ ಕೆನಡಾ ವಿಮಾನದ ಒಂದು ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.
ದಕ್ಷಿಣ ಕೊರಿಯಾದ ಮುಯಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 175ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಭೀಕರ ವಿಮಾನ ಅಪಘಾತದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ.
ಸೇಂಟ್ ಜಾನ್ಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ 'ಏರ್ ಕೆನಡಾ 2259' ವಿಮಾನ ಹ್ಯಾಲಿಫ್ಯಾಕ್ಸ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ವೇಳೆ ತೊಂದರೆ ಕಾಣಿಸಿಕೊಂಡಿದೆ. ಲ್ಯಾಂಡಿಂಗ್ ಗೇರ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ವಿಮಾನವು ಸ್ಕಿಡ್ ಆಗಿ ವಿಮಾನದ ಒಂದು ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಸುದ್ದಿಸಂಸ್ಥೆ ಸಿಎನ್‌ಎನ್ ವರದಿ ಮಾಡಿದೆ.
'ಲ್ಯಾಂಡಿಂಗ್ ಮಾಡುವ ವೇಳೆ ವಿಮಾನದ ಟೈರ್‌ಗಳು ಸರಿಯಾಗಿ ಕುಳಿತುಕೊಳ್ಳಲಿಲ್ಲ ಎಂದು ಅನಿಸುತ್ತದೆ. ವಿಮಾನವು ಎಡಕ್ಕೆ 20 ಡಿಗ್ರಿಯಷ್ಟು ವಾಲಿತ್ತು. ವಿಮಾನವು ಸ್ಕಿಡ್ ಆಗುತ್ತಿದ್ದು, ದೊಡ್ಡ ಶಬ್ದ ಕೇಳಿಬರುತ್ತಿತ್ತು' ಎಂದು ಮಹಿಳಾ ಪ್ರಯಾಣಿಕರಾದ ನಿಕ್ಕಿ ವ್ಯಾಲೆಂಟೈನ್ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಹ್ಯಾಲಿಫ್ಯಾಕ್ಸ್ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.