ಕಣ್ಣೂರು: ಕೇರಳದ ಆಡಳಿತ ಕಮ್ಯುನಿಸ್ಟ್ ಪಕ್ಷವು ಇತರೆ ಪಕ್ಷಗಳ ಬಗ್ಗೆ ಅಸಹಿಷ್ಣುತೆ ಹೊಂದಿದೆ ಹಾಗೂ ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹುಟ್ಟೂರಿನಲ್ಲೂ ಸಹ ಮುಕ್ತವಾಗಿ ಕಾರ್ಯನಿರ್ವಹಿಸಲು ಸ್ವಾತಂತ್ರ್ಯವಿಲ್ಲ ಎಂದು ಕೇರಳದ ವಿರೋಧ ಪಕ್ಷ ಆರೋಪಿಸಿದೆ.
ಇತ್ತೀಚೆಗಷ್ಟೇ ವೆಂಡುತಾಯಿಯಲ್ಲಿ ಧ್ವಂಸಗೊಂಡ ನೂತನ ಕಾಂಗ್ರೆಸ್ ಬೂತ್ ಕಮಿಟಿ ಕಚೇರಿಗೆ ಭೇಟಿನೀಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ವಿ. ಡಿ ಸತೀಶನ್, ಮಾರ್ಕ್ಸ್‌ವಾದಿ ಪಕ್ಷ ಹಾಗೂ ಸಿಎಂ ವಿಜಯನ್, ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುತ್ತಿದ್ದು ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಚೇರಿ ಧ್ವಂಸವು ಖಂಡನೀಯ ಎಂದು ಸಿಪಿಐ ಪಕ್ಷದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
'ರಾಜ್ಯದಲ್ಲಿ ಇದ್ಯಾವರೀತಿ ಪ್ರಜಾಪ್ರಭುತ್ವ ನೆಲೆಸಿದೆ, ಸ್ವತಃ ಮುಖ್ಯಮಂತ್ರಿಗಳ ಹುಟ್ಟೂರಿನಲ್ಲೂ ಇತರೆ ಪಕ್ಷಗಳು ಮುಕ್ತವಾಗಿ ಕಾರ್ಯನಿರ್ವಹಿಸುವ ಸ್ವಾತಂತ್ರ್ಯವಿಲ್ಲ, ಇದಕ್ಕೆ ಸ್ವತಃ 'ಸರ್ವಾಧಿಕಾರಿ'ಯಂತೆ ವರ್ತಿಸುತ್ತಿರುವ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಎಂದು ಸತೀಶನ್ ಆಗ್ರಹಿಸಿದರು.
'ಕಚೇರಿ ಧ್ವಂಸಕ್ಕೆ ಕಾರಣರಾದ ಪ್ರತಿಯೊಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಹೇಳಿದರು.