ಪ್ರಯಾಗ್‌ರಾಜ್: ದೇಶದ್ರೋಹ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ವ್ಯಕ್ತಿಯನ್ನು ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ನಿರ್ದೇಶಿಸಿದೆ.
ಪಾಕಿಸ್ತಾನದ ಪರವಾಗಿ ಪಿತೂರಿ ನಡೆಸಿದ ಕುರಿತು ಇವರ ವಿರುದ್ಧ ದೇಶದ್ರೋಹ ಸೇರಿ ಎರಡು ಪ್ರಕರಣಗಳಿದ್ದವು.
ಇದೇ ಕಾರಣದಿಂದ ಇವರಿಗೆ ಉತ್ತರ ಪ್ರದೇಶ ಸರ್ಕಾರ ಈ ಹಿಂದೆ ನೇಮಕಾತಿ ಆದೇಶ ನೀಡಿರಲಿಲ್ಲ.
ಅರ್ಜಿದಾರ ಪ್ರದೀಪ್ ಕುಮಾರ್ 2017ರಲ್ಲಿ ನ್ಯಾಯಾಂಗದ ಉನ್ನತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇವರಿಗೆ ಜನವರಿ 15, 2025ರ ಒಳಗೆ ನೇಮಕಾತಿ ಆದೇಶ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರದೀಪ್ ಕುಮಾರ್ ಸಲ್ಲಿಸಿದ್ದ ರಿಟ್ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೌಮಿತ್ರಾ ದಯಾಳ್ ಸಿಂಗ್ ಮತ್ತು ಡೋನಾಡಿ ರಮೇಶ್ ಅವರಿದ್ದ ಪೀಠವು, 'ಅರ್ಜಿದಾರರು ಪ್ರಕರಣದಲ್ಲಿ ಖುಲಾಸೆಗೊಂಡಿದ್ದಾರೆ. ಅವರ ವಿರುದ್ಧದ ಆರೋಪದಲ್ಲಿ ಸತ್ಯ ಕಂಡುಬಂದಿಲ್ಲ' ಎಂದು ಅಭಿಪ್ರಾಯಪಟ್ಟಿತು.
'ಈ ಕಾರಣದಿಂದ ರಿಟ್ ಅರ್ಜಿ ಮಾನ್ಯ ಮಾಡಲಾಗಿದೆ. ಎರಡು ವಾರಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಅವರಿಗೆ 'ಸನ್ನಡತೆ ಪ್ರಮಾಣಪತ್ರ' ನೀಡಬೇಕು ಹಾಗೂ ಜ. 15ರ ಒಳಗೆ ನೇಮಕಾತಿ ಆದೇಶ ನೀಡಬೇಕು. ಹಾಲಿ ಖಾಲಿ ಇರುವ ಹುದ್ದೆಯಲ್ಲಿ ಅರ್ಜಿದಾರರನ್ನು ನೇಮಕಾತಿ ಮಾಡಬಹುದು' ಎಂದು ಸೂಚಿಸಿತು.
ಕುಮಾರ್ ಅವರ ಕುಟುಂಬವು ಕಾನ್ಪುರದ ಮೆಸ್ಟೋನ್ ರಸ್ತೆ ಬಡಾವಣೆಯಲ್ಲಿ ನೆಲಸಿದೆ. ಕುಟುಂಬದ ಐವರು ಮಕ್ಕಳಲ್ಲಿ ಇವರೇ ಕಿರಿಯವರು. ಇವರನ್ನು ಆರೋಪದಿಂದ ಖುಲಾಸೆಗೊಳಿಸಿ ಹೆಚ್ಚುವರಿ ಸೆಷನ್ ನ್ಯಾಯಾಲಯವು ಮಾರ್ಚ್ 6, 2014ರಂದು ಆದೇಶ ನೀಡಿತ್ತು.
ನ್ಯಾಯಾಧೀಶರ ನೇಮಕಾತಿ ಆಯ್ಕೆಗೆ 2017ರ ಆಗಸ್ಟ್‌ನಲ್ಲಿ ನಡೆಸಲಾಗಿದ್ದ ಪರೀಕ್ಷೆಯನ್ನು ಇವರು ಬರೆದಿದ್ದು, ತೇರ್ಗಡೆಯಾಗಿದ್ದರು. ನಂತರದ ನೇಮಕಾತಿ ಆಯ್ಕೆ ಪಟ್ಟಿಯಲ್ಲಿಯೂ ಇವರ ಹೆಸರಿತ್ತು. ಆದರೆ, ನೇಮಕಾತಿ ಆದೇಶಪತ್ರವನ್ನು ನೀಡಿರಲಿಲ್ಲ.
'ಅರ್ಜಿದಾರರು ವಿದೇಶಿ ಗುಪ್ತದಳ ಸಂಸ್ಥೆಯ ಜೊತೆಗೆ ಶಾಮೀಲಾಗಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ಸರ್ಕಾರದ ಬಳಿ ಯಾವುದೇ ಸಾಕ್ಷ್ಯವಿಲ್ಲ' ಎಂದು ಖುಲಾಸೆಗೊಳಿಸಿದ್ದ ಸ್ಥಳೀಯ ಕೋರ್ಟ್ ಹೇಳಿತ್ತು.