ತಿರುವನಂತಪುರ: ದ್ವೇಷ ವ್ಯಾಪಕವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ನಾರಾಯಣ ಗುರು ಅವರು ಮನುಕುಲದ ಏಕತೆಗಾಗಿ ಸಾರಿದ್ದ ಸಂದೇಶವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಪೋಪ್ ಫ್ರಾನ್ಸಿಸ್ ಅವರು ಭಾನುವಾರ ಹೇಳಿದ್ದಾರೆ.
ಸಮಾಜ ಸುಧಾರಕ ನಾರಾಯಣ ಗುರು ಅವರು ಎರ್ನಾಕುಲಂ ಜಿಲ್ಲೆಯ ಅಲುವಾದಲ್ಲಿ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೋಪ್, ಜನರ ನಡುವೆ ಅಸಹಿಷ್ಣುತೆ, ದೇಶಗಳ ನಡುವೆ ದ್ವೇಷ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹಾಗೆಯೇ, ನಾರಾಯಣ ಗುರುಗಳ ಸಂದೇಶದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
'ಧಾರ್ಮಿಕ ಬೋಧನೆಗಳ ಸಾರವನ್ನು ಎತ್ತಿ ಹಿಡಿಯಲು ವಿಫಲವಾಗಿರುವುದು ಪ್ರಪಂಚದ ಸದ್ಯದ ಸ್ಥಿತಿಗೆ ಕಾರಣ' ಎಂದು ಒತ್ತಿ ಹೇಳಿದ್ದಾರೆ.
'ನಾರಾಯಣ ಗುರುಗಳು ಸಾಮಾಜಿಕ ಮತ್ತು ಧಾರ್ಮಿಕ ಜಾಗೃತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಪ್ರತಿಯೊಬ್ಬರೂ ತಮ್ಮದೇ ಧಾರ್ಮಿಕ ಅಥವಾ ಸಾಂಸ್ಕೃತಿಕ ಆಚಾರಗಳನ್ನು ಹೊಂದಿರುವುದರ ಹೊರತಾಗಿಯೂ, ಒಂದೇ ಮಾನವ ಕುಟುಂಬದ ಸದಸ್ಯರು ಎಂಬ ಸಂದೇಶವನ್ನು ಸಾರಿದ್ದರು' ಎಂದಿದ್ದಾರೆ.
'ಯಾವುದೇ ರೀತಿಯಲ್ಲಿ ಹಾಗೂ ಯಾವುದೇ ಹಂತದಲ್ಲಿ ಒಬ್ಬರಿಗೊಬ್ಬರ ನಡುವೆ ತಾರತಮ್ಯಗಳು ಇರಬಾರದು ಎಂಬುದಾಗಿ ಒತ್ತಾಯಿಸಿದ್ದರು' ಎಂದು ಶ್ಲಾಘಿಸಿದ್ದಾರೆ.
'ಧರ್ಮ, ಸಾಮಾಜಿಕ ಸ್ಥಿತಿ, ಜನಾಂಗ, ಬಣ್ಣ, ಭಾಷೆಯ ಆಧಾರದ ಹಿಂಸಾಚಾರ, ಉದ್ವಿಗ್ನತೆ, ತಾರತಮ್ಯ ಮತ್ತು ಪ್ರತ್ಯೇಕತೆಯು ಹಲವೆಡೆ ನಿತ್ಯವೂ ನಡೆಯುತ್ತಿದೆ. ಅದರಲ್ಲೂ, ಬಡವರು, ದುರ್ಬಲರು, ದಮನಿತರಲ್ಲಿ ಇದು ಸಾಮಾನ್ಯವೆಂಬಂತಾಗಿರುವುದು ದುಃಖದ ಸಂಗತಿ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.