ಕಾಸರಗೋಡು: ನಗರಸಭೆಯ ಸಿಬ್ಬಂದಿ ಎದುರಲ್ಲೇ ನಗರಸಭಾ ಕಾರ್ಯದರ್ಶಿಗೆ ತಳಂಗರೆ ನಿವಾಸಿಗಳೆನ್ನಲಾದ ಇಬ್ಬರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ನಗರಠಾಣೆ ಪೊಲೀಸರು ಕೇಸು ದಾಕಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಕಟ್ಟಡ ನಂಬ್ರ ಪಡೆಯುವ ನಿಟ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ನಕಲಿ ಸಹಿ ಹಾಕಿರುವುದನ್ನು ಪ್ರಶ್ನಿಸಿರುವುದಲ್ಲದೆ, ಇದನ್ನು ರದ್ದುಗೊಳಿಸಿದ್ದ ನಗರಸಭಾ ಕಾರ್ಯದರ್ಶಿ ಪಿ.ಎ ಜಸ್ಟಿನ್ ಅವರ ಮೇಲೆ ತಂಡ ಹಲ್ಲೆ ನಡೆಸಿದೆ. ತಳಂಗರೆಯ ಕಟ್ಟಡವೊಂದರ 580ಚದರ ಅಡಿ ಬಳಸಿಕೊಳ್ಳಲು ಜಸ್ಟಿನ್ ಅನುಮತಿ ನೀಡಿದ್ದು, ಕಡತ ಪರಿಶೀಲಿಸಿದಾಗ 892.9ಚ.ಅಡಿ ವಿಸ್ತೀರ್ಣಕ್ಕೆ ಅನುಮತಿ ನೀಡಿದ ರೀತಿಯಲ್ಲಿ ನಕಲಿ ದಾಖಲೆ ತಯಾರಿಸಿ ಇದಕ್ಕೆ ಕಾರ್ಯದರ್ಶಿಯ ನಕಲಿ ಸಹಿ ಹಾಕಿರುವುದನ್ನು ಪತ್ತೆಹಚ್ಚಿ, ಇದನ್ನು ರದ್ದುಗೊಳಿಸಿದ್ದರು. ಹಲ್ಲೆ ನಡೆಸಿದವರ ವಿರುದ್ಧ ಜಸ್ಟಿನ್ ಅವರು ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ನಗರಸಭಾ ಕಾರ್ಯದರ್ಶಿ ಮೇಲಿನ ಹಲ್ಲೆ ಖಂಡಿಸಿ ನಗರಸಭಾ ಸಿಬ್ಬಂದಿ ವರ್ಗ ಕಚೇರಿ ಎದುರು ಪ್ರತಿಭಟನೆ ನಡೆಸಿ, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದೆ. ಹಲ್ಲೆ ನಡೆಸಿದವರ ಸಿಸಿ ಕ್ಯಾಮರಾ ದೃಶ್ಯಾವಳಿ ಪೊಲೀಸರಿಗೆ ಲಭಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.