ಪತ್ತನಂತಿಟ್ಟ: ಶಬರಿಮಲೆ ಶ್ರೀ ಅಯ್ಯಪ್ಪ ದೇವರ ವಿಗ್ರಹದ ಮಾದರಿಯ ಚಿನ್ನದ ಪದಕಗಳನ್ನು ತಯಾರಿಸಿ ಭಕ್ತಾದಿಗಳಿಗೆ ವಿತರಿಸಲು ತಿರುವಾಂಕೂರು ದೇವಸ್ವಂ ಬೋರ್ಡ್(ಟಿಡಿಬಿ)ಆಡಳಿತ ಮಂಡಳಿ ಮತ್ತೆ ಸಿದ್ಧತೆ ನಡೆಸುತ್ತಿದೆ. ಟಿಡಿಬಿಯ ಅಮೃತಮಹೋತ್ಸವ ವರ್ಷಾಚರಣೆ ಅಂಗವಾಗಿ ಈ ಚಿನ್ನದ ಲಾಕೆಟ್‍ಗಳನ್ನು ಮರು ಲಾಂಚಿಂಗ್ ನಡೆಸಲಾಗುವುದು. ಒಂದು ಗ್ರಾಮ್‍ನಿಂದ ಎಂಟು ಗ್ರಾಂ ವರೆಗಿನ ವಿವಿಧ ತೂಕದ ಪದಕಗಳನ್ನು ತಯಾರಿಸಲು ತಿರುವಾಂಕೂರು ದೇವಸ್ವಂ ಬೋರ್ಡ್ ಆಡಳಿತ ಸಮಿತಿ ತೀರ್ಮಾನಿಸಿದೆ. ಹಲವು ಮಂದಿ ಪ್ರಮುಖ ಜ್ಯುವೆಲ್ಲರಿ ಮಾಲಿಕರು ಪದಕ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ. ಪ್ರಸಕ್ತ ವರ್ಷದ ಶಬರಿಮಲೆ ಋತುವಿನಲ್ಲೇ ಪದಕ ತಯಾರಿಸಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪದಕ ತಯಾರಿಗೆ ಕನಿಷ್ಠ 20 ದಿವಸಗಳು ಬೇಕಾಗಿಬರಲಿದೆ. ಮಂಡಲ ಮಹೋತ್ಸವಕ್ಕೆ ಇನ್ನೇನಿದ್ದರೂ, 13ದಿವಸ ಬಾಕಿಯಿದ್ದು, ಮಕರಸಂಕ್ರಮಣ ಮಹೋತ್ಸವದ ವೇಳೆಗೆ ಪದಕ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ವಂ ಬೋರ್ಡ್ ಸದಸ್ಯ, ವಕೀಲ ಎ. ಅಜಿತ್ ಕುಮಾರ್ ತಿಳಿಸಿದ್ದಾರೆ.
ಶಬರಿಮಲೆಯಲ್ಲಿ 1980ರಿಂದ ವಿತರಿಸಲಾಗುತ್ತಿದ್ದ ಚಿನ್ನ ಹಾಗೂ ಬೆಳ್ಳಿಯ ಪದಕಗಳ ತಯಾರಿಯನ್ನು 2012ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ವಿತರಿಸಲಾಗುತ್ತಿದ್ದ ಅದೇ ಮಾದರಿಯಲ್ಲಿ ಶಬರಿಮಲೆಯಲ್ಲೂ ಈ ಹಿಂದೆ ಪದಕ ವಿತರಿಸಲಾಗುತ್ತಿತ್ತು. ಅಂದು ಲಾಕೆಟ್‍ನ ಒಂದು ಪಶ್ರ್ವದಲ್ಲಿ ಶ್ರೀ ಅಯ್ಯಪ್ಪ ಮತ್ತು ಇನ್ನೊಂದು ಭಾಗದಲ್ಲಿ ಗಣೇಶನ ಆಕೃತಿ ಮುದ್ರಿಸಲಾಗಿದ್ದು, ಚಿನ್ನ ಲೇಪಿತ ಲಾಕೆಟ್ ಬೆಲೆ 500ರೂ. ನಿಗದಿಪಡಿಸಲಾಗಿತ್ತು. ಈ ಬಾರಿ ಸಂಪೂರ್ಣ ಚಿನ್ನದಿಂದ ತಯಾರಿಸಿದ ಲಾಕೆಟ್ ಭಕ್ತಾದಿಗಳ ಕೈಸೇರಲಿದೆ. ಪದಕ ನಿರ್ಮಾಣದ ಗುತ್ತಿಗೆ ವಹಿಸಿಕೊಳ್ಳುವವರೇ ಚಿನ್ನ ಖರೀದಿಸಿ ಪದಕ ದೇವಸ್ವಂ ಬೋರ್ಡ್‍ಗೆ ಪೂರೈಸಲಿದ್ದಾರೆ.