ನವದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ದ್ವೇಷ ಭಾಷಣ, ರಾಜಕೀಯ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಸಭೆಯಲ್ಲಿ 'ಇಂಡಿಯಾ' ಮೈತ್ರಿಕೂಟದ ಸಂಸದರು ಮಹಾಭಿಯೋಗ ಅಥವಾ ದೋಷಾರೋಪಣೆ ಪ್ರಕ್ರಿಯೆ ಆರಂಭಿಸಿದ್ದಾರೆ.
ರಾಜ್ಯಸಭೆಯಲ್ಲಿ ಶೀಘ್ರವೇ ದೋಷಾರೋಪಣೆ ನಿರ್ಣಯವನ್ನು ಮಂಡಿಸುವ ಸಲುವಾಗಿ 'ಇಂಡಿಯಾ' ಬಣದ ಸಂಸದರು ಸಹಿ ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭೆಯಲ್ಲಿ ದೋಷಾರೋಪಣೆ ನಿರ್ಣಯವನ್ನು ಅಂಗೀಕರಿಸಲು ಕನಿಷ್ಠ 50 ಸಂಸದರ ಸಹಿ ಅಗತ್ಯವಿದೆ.
ಕಾಂಗ್ರೆಸ್‌ನ ಹಿರಿಯ ಸಂಸದರಾದ ಕಪಿಲ್ ಸಿಬಲ್, ವಿವೇಕ್ ಟಂಖಾ ಮತ್ತು ರೇಣುಕಾ ಚೌಧರಿ, ಆರ್‌ಜೆಡಿಯ ಮನೋಜ್ ಕೆ., ಜಾನ್ ಬ್ರಿಟಾಸ್, ವಿ.ಶಿವದಾಸನ್, ಸಿಪಿಎಂನ ಎ.ಎ. ರಹೀಮ್, ಪಿ. ಸಂದೋಷ್ ಕುಮಾರ್, ಸಿಪಿಐನ ಪಿ.ಪಿ. ಸುನೀರ್, ತೃಣಮೂಲ ಕಾಂಗ್ರೆಸ್‌ನ ಸಾಕೇತ್ ಗೋಖಲೆ ಸೇರಿದಂತೆ ಕೇರಳದ ಕಾಂಗ್ರೆಸ್ ಸಂಸದ ಜೋಸ್ ಕೆ. ಮಣಿ ಇತರರು ನೋಟಿಸ್‌ಗೆ ಸಹಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ಕಾರ್ಯಕ್ರಮವೊಂದರಲ್ಲಿ ಆಡಿದ ಮಾತುಗಳ ಕುರಿತ ಮಾಧ್ಯಮ ವರದಿಗಳನ್ನು ಗಮನಿಸಿರುವ ಸುಪ್ರೀಂ ಕೋರ್ಟ್, ವಿವರ ನೀಡುವಂತೆ ಅಲಹಾಬಾದ್ ಹೈಕೋರ್ಟ್‌ಗೆ ಮಂಗಳವಾರ ಸೂಚನೆ ನೀಡಿತ್ತು.
ಏಕರೂಪ ನಾಗರಿಕ ಸಂಹಿತೆಯ ಮುಖ್ಯ ಉದ್ದೇಶ ಸಾಮಾಜಿಕ ಸೌಹಾರ್ದ, ಲಿಂಗ ಸಮಾನತೆ ಮತ್ತು ಧರ್ಮನಿರಪೇಕ್ಷತೆಯನ್ನು ಉತ್ತೇಜಿಸುವುದು ಎಂದು ನ್ಯಾಯಮೂರ್ತಿ ಯಾದವ್ ಅವರು, ವಿಎಚ್‌ಪಿಯ ಕಾನೂನು ವಿಭಾಗದ ಪ್ರಾಂತೀಯ ಸಮಾವೇಶದಲ್ಲಿ ಹೇಳಿದ್ದರು.
ಕಾರ್ಯಕ್ರಮ ನಡೆದ ಒಂದು ದಿನದ ನಂತರ, ಬಹುಸಂಖ್ಯಾತರಿಗೆ ಅನುಗುಣವಾಗಿ ಕಾನೂನು ಕೆಲಸ ಮಾಡಬೇಕು ಎಂಬುದು ಸೇರಿದಂತೆ ಕೆಲವು ಪ್ರಚೋದನಕಾರಿ ವಿಷಯಗಳ ಬಗ್ಗೆ ನ್ಯಾಯಮೂರ್ತಿಯವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೊಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಅವರು ಆಡಿದ್ದಾರೆ ಎನ್ನಲಾದ ಮಾತುಗಳನ್ನು ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿದ್ದವು. ಈ ಮಾತುಗಳು ದ್ವೇಷ ಭಾಷಣಕ್ಕೆ ಸಮ ಎಂದು ಅವು ಹೇಳಿದ್ದವು.