ಗುವಾಹಟಿ: ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬೋರಾ ಅವರು ತಮಗೆ ಪತ್ರ ಬರೆದರೆ ಅಸ್ಸಾಂನಲ್ಲಿ ಗೋಮಾಂಸ ನಿಷೇಧಿಸಲು ಸಿದ್ಧ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಮುಸ್ಲಿಂ ಪ್ರಾಬಲ್ಯದ ಸಮಗುರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಸತತ ಐದು ಬಾರಿ ಗೆಲುವು ಸಾಧಿಸಿತ್ತು.
ಆದರೆ, 2024ರ ಉಪ ಚುನಾವಣೆಯಲ್ಲಿ ಬಿಜೆಪಿ ಜಯ ದಾಖಲಿಸಿದೆ. ಇಲ್ಲಿ ಜಯ ಗಳಿಸಲು ಬಿಜೆಪಿಯು ಮತದಾರರಿಗೆ ಗೋ ಮಾಂಸ ಹಂಚಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಶರ್ಮಾ, ಕಾಂಗ್ರೆಸ್ ಈ ವಿಚಾರ ಪ್ರಸ್ತಾಪಿಸಿರುವುದಕ್ಕೆ ಸಂತೋಷವಾಗುತ್ತಿದೆ ಎಂದಿದ್ದಾರೆ.
'ಸಮಗುರಿ ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಜೊತೆಗಿತ್ತು. ಇಲ್ಲಿ ಸೋಲು ಕಂಡಿರುವುದರಿಂದ ಆ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಇದು ಬಿಜೆಪಿಯ ಗೆಲುವು ಎನ್ನುವುದಕ್ಕಿಂತಲೂ, ಕಾಂಗ್ರೆಸ್‌ನ ಸೋಲು' ಎಂದು ವ್ಯಾಖ್ಯಾನಿಸಿದ್ದಾರೆ.
ಕಳೆದ ತಿಂಗಳು ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಡಿಪ್ಲು ರಂಜನ್ ಶರ್ಮಾ ಅವರು ಕಾಂಗ್ರೆಸ್‌ನ ತಂಜಿಲ್ ಹುಸ್ಸೇನ್ ವಿರುದ್ಧ 24,501 ಮತಗಳಿಂದ ಜಯ ಸಾಧಿಸಿದ್ದಾರೆ.
'ಸೋಲಿನ ನೋವಿನ ನಡುವೆಯೂ, ರಕೀಬುಲ್ ಹುಸ್ಸೇನ್ (ಕಾಂಗ್ರೆಸ್ ಸಂಸದ) ಅವರು ಗೋಮಾಂಸ ತಿನ್ನುವುದು ತಪ್ಪು ಎಂಬ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಅಲ್ಲವೇ? ಚುನಾವಣೆ ಗೆಲ್ಲುವುದಕ್ಕಾಗಿ ಕಾಂಗ್ರೆಸ್-ಬಿಜೆಪಿ ಗೋಮಾಂಸ ಹಂಚುವುದು ತಪ್ಪು ಎಂದಿದ್ದಾರೆ' ಎಂದು ಉಲ್ಲೇಖಿಸಿರುವ ಸಿಎಂ, 'ಕಾಂಗ್ರೆಸ್ ಪಕ್ಷವು ಮತದಾರರಿಗೆ ಗೋಮಾಂಸ ಹಂಚಿ ಸಮಗುರಿಯಲ್ಲಿ ಗೆಲ್ಲುತ್ತಿತ್ತೇ ಎಂದು ತಿಳಿಯಲು ಬಯಸುತ್ತೇನೆ. (ರಕೀಬುಲ್ ಹುಸ್ಸೇನ್) ಅವರಿಗೆ ಸಮಗುರಿ ಚೆನ್ನಾಗಿ ಗೊತ್ತಿದೆ. ಸಮಗುರಿಯಲ್ಲಿ ದನದ ಮಾಂಸ ಹಂಚಿದರೆ ಚುನಾವಣೆ ಗೆಲ್ಲಬಹುದು ಎಂಬುದು ಅವರ ಮಾತಿನ ಅರ್ಥವೇ' ಎಂದು ಮರು ಪ್ರಶ್ನೆ ಹಾಕಿದ್ದಾರೆ.
ರಕೀಬುಲ್ ಅವರು, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಧುಬ್ರಿ ಲೋಕಸಭಾ ಕ್ಷೇತ್ರದಲ್ಲಿ 10 ಲಕ್ಷಕ್ಕೂ ಅಧಿಕ ಮತಗಳ ದಾಖಲೆ ಅಂತರದಿಂದ ಗೆಲುವು ಸಾಧಿಸಿದ್ದರು. ಸಮಗುರಿಯೂ ಧುಬ್ರಿ ವ್ಯಾಪ್ತಿಗೆ ಬರುತ್ತದೆ.
'ರಕೀಬುಲ್ ಅವರೇ ಹೇಳುವಂತೆ ಗೋಮಾಂಸ ಸೇವನೆ ತಪ್ಪು. ಅದನ್ನು ನಿಷೇಧಿಸಬೇಕಿದೆ. ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಗೋಮಾಂಸದ ಬಗ್ಗೆ ಸುಮ್ಮನೆ ಮಾತನಾಡುವ ಬದಲು, ವಾಸ್ತವವಾಗಿ ಅಸ್ಸಾಂನಲ್ಲಿ ನಿಷೇಧಿಸಬೇಕು. ಆ ಬಗ್ಗೆ ನನಗೆ ಅವರು ಲಿಖಿತವಾಗಿ ಪತ್ರ ಬರೆಯಲಿ. ಅವರು ಆ ರೀತಿ ಮಾಡಿದರೆ, ಎಲ್ಲ ಸಮಸ್ಯೆಗಳೂ ಬಗೆಹರಿಯುತ್ತವೆ' ಎಂದು ತಿರುಗೇಟು ನೀಡಿದ್ದಾರೆ.
ಃSಈ ಸ್ಥಾಪನಾ ದಿನ: ಯೋಧರ ಶೌರ್ಯಕ್ಕೆ ಮೋದಿ, ರಾಹುಲ್ ಸೇರಿದಂತೆ ಗಣ್ಯರಿಂದ ಶ್ಲಾಘನೆತಮಿಳುನಾಡು ಕರಾವಳಿಗೆ ಅಪ್ಪಳಿಸಿದ ಫೆಂಗಲ್ ಚಂಡಮಾರುತ, ಭಾರಿ ಮಳೆ
ಮುಂದುವರಿದು, ಗೋಮಾಂಸದ ಬಗ್ಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ನಿಲುವು ಏನು ಎಂಬುದನ್ನು ತಿಳಿಯಲು ಪತ್ರ ಬರೆಯುತ್ತೇನೆ ಎಂದಿದ್ದಾರೆ.
'ಭೂಪೇನ್ ಅವರಿಗೆ ಪತ್ರ ಬರೆದು ಕೇಳುತ್ತೇನೆ. ಅವರೂ, ರಕೀಬುಲ್ ಅವರಂತೆ ಗೋಮಾಂಸ ನಿಷೇಧವನ್ನು ಪ್ರತಿಪಾದಿಸಿದರೆ, ನನಗೆ ತಿಳಿಸಲಿ. ಅದರಂತೆ, ಮುಂದಿನ ವಿಧಾನಸಭೆ ಹೊತ್ತಿಗೆ ಗೋಮಾಂಸ ಸಂಪೂರ್ಣ ನಿಷೇಧಿಸುತ್ತೇವೆ. ಆಗ, ಯಾವ ಪಕ್ಷದವರೂ ಮತದಾರರಿಗೆ ಗೋಮಾಂಸ ಹಂಚಲು ಸಾಧ್ಯವಾಗದು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರೆಲ್ಲರೂ ಗೋಮಾಂಸ ತಿನ್ನುವುದನ್ನು ನಿಲ್ಲಿಸಲಿ. ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ' ಎಂದು ಒತ್ತಿ ಹೇಳಿದ್ದಾರೆ.
'ರಕೀಬುಲ್ ಅವರು ಈ ಹೇಳಿಕೆ ನೀಡಿರುವುದು ಸಂತೋಷ ತಂದಿದೆ. ಅವರಾದರೂ ಕನಿಷ್ಠ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಎರಡನೇ ಹೆಜ್ಜೆಯನ್ನು ಭೂಪೇನ್ ಇಡಲಿ' ಎನ್ನುವ ಮೂಲಕ ಕಾಂಗ್ರೆಸ್‌ಗೆ ತಿವಿದಿದ್ದಾರೆ.
ಅಸ್ಸಾಂನಲ್ಲಿ ಗೋಮಾಂಸ ಸೇವನೆ ಕಾನೂನುಬಾಹಿರವಲ್ಲ. ಆದರೆ, ಅಸ್ಸಾಂ ಗೋ ಸಂರಕ್ಷಣಾ ಕಾಯ್ದೆ 2021ರ ಪ್ರಕಾರ, ಹಿಂದೂಗಳು, ಜೈನರು ಮತ್ತು ಸಿಖ್ ಸಮುದಾಯದವರು ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ, ದೇವಾಲಯ ಅಥವಾ ವೈಷ್ಣವ ಮಠಗಳ ಆಸುಪಾಸಿನಲ್ಲಿ ಗೋಹತ್ಯೆ ಮಾಡುವುದು, ಅದರ ಮಾಂಸ ಮಾರಾಟ ಮಾಡುವುದು ನಿಷಿದ್ಧ.