ಚೆನ್ನೈ: ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕಿ ಎಂ.ಎಸ್.ಸುಬ್ಬುಲಕ್ಷ್ಮಿ ಹೆಸರಿನ ಪ್ರಶಸ್ತಿಯನ್ನು ಗಾಯಕ ಟಿ.ಎಂ.ಕೃಷ್ಣ ಅವರಿಗೆ ಪ್ರದಾನ ಮಾಡದಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ಶುಕ್ರವಾರ ರದ್ದು ಮಾಡಿದೆ.
ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸ್ಥಾಪಿಸಿರುವ, ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಹೆಸರಿನ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಕೃಷ್ಣ ಅವರಿಗೆ ಪ್ರದಾನ ಮಾಡುವುದಕ್ಕೆ ವಿಭಾಗೀಯ ಪೀಠ ಅನುಮತಿ ನೀಡಿದೆ.
₹1 ಲಕ್ಷ ನಗದು ಪುರಸ್ಕಾರ ಒಳಗೊಂಡ ಈ ಪ್ರಶಸ್ತಿಯನ್ನು ಪತ್ರಿಕಾ ಸಂಸ್ಥೆ //ದಿ ಹಿಂದೂ ನೀಡುತ್ತಿದ್ದು,// ಜನವರಿ 1ರಂದು ಪ್ರದಾನ ಮಾಡಲಾಗುತ್ತದೆ.
ಇನ್ನೊಂದೆಡೆ, ಏಕಸದಸ್ಯ ಪೀಠದ ಆದೇಶ ರದ್ದು ಮಾಡಿ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ತೀರ್ಪು ನೀಡಿದ ಕೆಲ ಗಂಟೆಗಳಲ್ಲಿಯೇ, ಅದನ್ನು ಪ್ರಶ್ನಿಸಿ ಅರ್ಜಿದಾರ ವಿ.ಶ್ರೀನಿವಾಸನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ತಮ್ಮ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಶ್ರೀನಿವಾಸನ್ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್.ವೆಂಕಟರಾಮನ್ ಅವರ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿತು.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ಪೀಠ ಅರ್ಜಿ ವಿಚಾರಣೆ ನಡೆಸಿತು.
ಪ್ರಕರಣವೇನು?: ಟಿ.ಎಂ.ಕೃಷ್ಣ ಅವರಿಗೆ 'ಸಂಗೀತ ಕಲಾನಿಧಿ ಎಂ.ಎಸ್.ಸುಬ್ಬುಲಕ್ಷ್ಮಿ' ಹೆಸರಿನ ಪ್ರಶಸ್ತಿ ನೀಡುವ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ನಿರ್ಧಾರವನ್ನು ಆಕ್ಷೇಪಿಸಿ ಸುಬ್ಬುಲಕ್ಷ್ಮಿ ಅವರ ಮೊಮ್ಮಗ ವಿ.ಶ್ರೀನಿವಾಸನ್ ಕೋರ್ಟ್ ಮೆಟ್ಟಿಲೇರಿದ್ದರು.
'ನನ್ನ ಹೆಸರಿನಲ್ಲಿ ಯಾವುದೇ ಟ್ರಸ್ಟ್, ಪ್ರತಿಷ್ಠಾನ ಅಥವಾ ಯಾವುದೇ ರೀತಿಯ ಸ್ಮಾರಕ ಸ್ಥಾಪಿಸಬಾರದು. ಯಾವುದೇ ದೇಣಿಗೆ ಅಥವಾ ನಿಧಿಯನ್ನು ಕೂಡ ಸಂಗ್ರಹಿಸಬಾರದು ಎಂದು ನನ್ನ ಅಜ್ಜಿ 1997ರಲ್ಲಿ ಬರೆದಿರುವ ಉಯಿಲಿನಲ್ಲಿ ಹೇಳಿದ್ಧಾರೆ' ಎಂದು ಶ್ರೀನಿವಾಸನ್ ಅರ್ಜಿಯಲ್ಲಿ ತಿಳಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜಿ.ಜಯಚಂದ್ರನ್ ಅವರು ಇದ್ದ ಏಕಸದಸ್ಯ ಪೀಠ, ಶ್ರೀನಿವಾಸನ್ ಅವರ ವಾದವನ್ನು ಒಪ್ಪಿದ್ದರು. ಸುಬ್ಬುಲಕ್ಷ್ಮಿ ಹೆಸರಿನಲ್ಲಿ ಯಾವುದೇ ಪ್ರಶಸ್ತಿ ನೀಡಬಾರದು ಎಂದು ನವೆಂಬರ್ 19ರಂದು ಆದೇಶಿಸಿದ್ದರು.
ಮದ್ರಾಸ್ ಮ್ಯೂಸಿಕ್ ಅಕಾಡೆಮಿ, ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಮೇಲ್ಕನವಿ ವಿಚಾರಣೆ ಮಾಡಿದ, ನ್ಯಾಯಮೂರ್ತಿಗಳಾದ ಎಸ್.ಎಸ್.ಸುಂದರ್ ಹಾಗೂ ಪಿ.ಧನಪಾಲ್ ಅವರು ಇದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶವನ್ನು ರದ್ದುಪಡಿಸಿತು.
'ಸ್ಮರಣಾರ್ಥ ಎಂಬ ಪದವನ್ನು ಹಲವು ರೀತಿ ವ್ಯಾಖ್ಯಾನಿಸಬಹುದು. ಅಲ್ಲದೇ, ನನ್ನ ಹೆಸರಿನಲ್ಲಿ ಯಾವುದೇ ಪ್ರಶಸ್ತಿ ನೀಡಬಾರದು ಎಂಬುದಾಗಿ ಸುಬ್ಬುಲಕ್ಷ್ಮಿ ಅವರ ಉಯಿಲಿನಲ್ಲಿ ನಿರ್ದಿಷ್ಟವಾಗಿ ಹೇಳಿಲ್ಲ' ಎಂದ ವಿಭಾಗೀಯ ಪೀಠ, 'ಗಾಯಕ ಟಿ.ಎಂ.ಕೃಷ್ಣ ಅವರು ₹1 ಲಕ್ಷ ನಗದು ಮತ್ತು ಸಂಗೀತ ಕಲಾನಿಧಿ ಎಂ.ಎಸ್.ಸುಬ್ಬುಲಕ್ಷ್ಮಿ ಪ್ರಶಸ್ತಿ ಸ್ವೀಕರಿಸಬಹುದು' ಎಂದು ಸ್ಪಷ್ಟಪಡಿಸಿದೆ.
ವಿರೋಧವೇಕೆ?: 'ನನ್ನ ಅಜ್ಜಿ ವಿರುದ್ಧ ಕೃಷ್ಣ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿಂದನೀಯ ಹಾಗೂ ಮಾನಹಾನಿಕರ ದಾಳಿ ನಡೆಸಿದ್ದಾರೆ. ಅವರ ಖ್ಯಾತಿಗೆ ಕಳಂಕ ತಂದಿರುವ ಕಾರಣ, ಅವರ ಹೆಸರಿನ ಪ್ರಶಸ್ತಿಯನ್ನು ಕೃಷ್ಣ ಅವರಿಗೆ ಪ್ರದಾನ ಮಾಡಬಾರದು' ಎಂಬುದು ಶ್ರೀನಿವಾಸನ್ ಅವರ ವಾದವಾಗಿದೆ.
'ಭಕ್ತಿ ಸಂಗೀತಕ್ಕೆ ಸಂಬಂಧಿಸಿದ ಸುಬ್ಬುಲಕ್ಷ್ಮಿ ಹೆಸರಿನ ಈ ಪ್ರಶಸ್ತಿಯನ್ನು ನಾಸ್ತಿಕನಿಗೆ ನೀಡಿದಂತಾಗಲಿದೆ' ಎಂದೂ ಹೇಳಿದ್ದರು.