ಕೊಚ್ಚಿ: ಪೋಲೀಸ್ ಠಾಣೆಯಲ್ಲಿ ಆರೋಪಿಗಳನ್ನು ಥಳಿಸುವುದು ಅಧಿಕೃತ ಕರ್ತವ್ಯವಲ್ಲ ಎಂದು ಹೈಕೋರ್ಟ್ ಹೇಳಿದೆ. ಇಂತಹ ಘಟನೆಗಳಲ್ಲಿ ಪೋಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರದ ಪೂರ್ವಾನುಮತಿ ಅಗತ್ಯವಿಲ್ಲ ಎಂದೂ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಆದೇಶವು ನಿಲಂಬೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ವಿರುದ್ಧ ಮಾಜಿ ಎಸ್‍ಐ ನಿಲಂಬೂರ್ ಸಿ ಅಲವಿ ಸಲ್ಲಿಸಿದ್ದ ಪರಿಷ್ಕøತ ಅರ್ಜಿಯನ್ನು ತಿರಸ್ಕರಿಸಿ ನೀಡಲಾಗಿದೆ. ಮಹಿಳೆಯನ್ನು ನಿಂದಿಸಿದ ಆರೋಪದ ಮೇಲೆ ಠಾಣೆಗೆ ಕರೆದ ಯುವಕನಿಗೆ ಎಸ್‍ಐ ಥಳಿಸಿದ್ದಾರೆ. ಅದೇ ಠಾಣೆಯಲ್ಲಿ ಕೆಲಸ ಮಾಡುವ ಯುವಕನ ಸಹೋದರಿ ಆತನನ್ನು ತಡೆಯಲು ಯತ್ನಿಸಿದ್ದು, ಗರ್ಭಿಣಿಯಾದ ಆಕೆಗೂ ಥಳಿಸಲಾಗಿತ್ತು. ಆದರೆ ನಂತರ ಡಿವೈಎಸ್ಪಿ ನಡೆಸಿದ ತನಿಖೆಯಲ್ಲಿ ಯುವಕನ ವಿರುದ್ಧದ ಪ್ರಕರಣ ಸುಳ್ಳು ಎಂದು ತಿಳಿದುಬಂದಿದೆ. ಎಸ್‍ಐ ವಿರುದ್ಧ ವೈಯಕ್ತಿಕ ದೂರಿನನ್ವಯ ಪ್ರಕರಣ ದಾಖಲಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿತ್ತು. ಆದರೆ ಕರ್ತವ್ಯದ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಕರಣ ದಾಖಲಿಸಲು ಸರ್ಕಾರದ ಅನುಮತಿ ಬೇಕು ಎಂಬುದು ಅಲವಿ ಅವರ ವಾದವಾಗಿತ್ತು. ಹೈಕೋರ್ಟ್ ನೀಡಿರುವ ಈಗಿನ ಆದೇಶ ಇದಕ್ಕೆ ವಿರುದ್ಧವಾಗಿದೆ.