ಪೆರ್ಲ : ಪೇಟೆಯ ಕಟ್ಟಡವೊಂದಕ್ಕೆ ಶನಿವಾರ ತಡ ರಾತ್ರಿ ಬೆಂಕಿ ಹತ್ತಿಕೊಂಡಿದ್ದು ಐದು ಅಂಗಡಿಗಳು ಸಂಪೂರ್ಣವಾಗಿ ಹೊತ್ತಿ ಉರಿದು ನಾಶವಾಗಿದೆ.
ಇಲ್ಲಿನ ಬದಿಯಡ್ಕ ಪುತ್ತೂರು ರಸ್ತೆಯ ಎಡಭಾಗದಲ್ಲಿರುವ ಪೂಜಾ ಫ್ಯಾನ್ಸಿ, ಗೋಪಿನಾಥ ಪೈಗಳ ಗೋಪಿಕಾ ಕ್ಲೋತ್ ಸ್ಟೋರ್ ಸಹಿತ ಪೇಪರ್ ವಿತರಣ ಸೆಂಟರ್,ಪ್ರವೀಣ್ ಆಟೋಮೊಬೈಲ್ಸ್,ಸದಾತ್ ಸ್ಟೋರ್, ಗೌತಮ್ ಕೋಲ್ಡ್ ಹೌಸ್ ಎಂಬಿ ಅಂಗಡಿ ಮುಂಗಟ್ಟು ಈ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದೂ ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ.
ಮಧ್ಯರಾತ್ರಿ 12 ಗಂಟೆಯ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಸೇರಿದ ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು.
ಶೇಣಿ ನಿವಾಸಿ ನಾರಾಯಣ ಪೂಜಾರಿ ಮಾಲಕತ್ವದಲ್ಲಿರುವ ಪೂಜಾ ಫ್ಯಾನ್ಸಿ,ಪೆರ್ಲ ನಿವಾಸಿ ಮೋನು ಎಂಬವರ ತರಕಾರಿ ಅಂಗಡಿ, ಜಯದೇವ ಬಾಳಿಗ ಗೌತಮ್ ಕೋಲ್ಡ್ ಹೌಸ್, ಮೊಹಮ್ಮದ್ ಎಂಬವರ ಸಾದತ್ ಜನರಲ್ ಸ್ಟೋರ್, ಅಮೆಕ್ಕಳ ನಿವಾಸಿ ಪ್ರವೀಣ್ ಪೈ ಮಾಲಕತ್ವದ ಪ್ರವೀಣ್ ಆಟೋ ಮೊಬೈಲ್ಸ್, ಸಂಜೀವ ಎಂಬವರ ಕಬ್ಬಿನ ಹಾಲಿನ ಅಂಗಡಿ ಬೆಂಕಿಗೆ ಅಹುತಿಯಾಗಿದೆ.
ಘಟನೆ ಅರಿತು ಕಾಸರಗೋಡು ಹಾಗೂ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದವರು ಬದಿಯಡ್ಕ ಪೊಲೀಸ್ ಅಧಿಕಾರಿಗಳು ಮತ್ತು ಊರವರ ಸಹಕಾರದೊಂದಿಗೆ ಬೆಂಕಿ ನಂದಿಸಲು ಸಹಕರಿಸಿದರು.
ಬೆಂಕಿಯ ಕೆನ್ನಾಲಿಗೆ ಸಮೀಪದ ಕಟ್ಟಡಗಳಿಗೂ ಹಬ್ಬುವ ಪರಿಸ್ಥಿತಿ ಇದ್ದು ಉಪ್ಪಳ ಮತ್ತು ಕಾಸರಗೋಡಿನಿಂದ ನಾಲ್ಕೈದು ಅಗ್ನಿಶಾಮಕ ದಳಗಳು ಬಂದಿದ್ದು ಸುಮಾರು ನಾಲ್ಕು ಗಂಟೆಗಳ ಸತತ ಪ್ರಯತ್ನದಿಂದ ಬೆಂಕಿ ನಂದಿಸಲಾಗಿತ್ತು. ಬೆಂಕಿ ಉರಿಯುವ ವೇಳೆ ಊರವರು ಜಮಾಯಿಸಿದ್ದು ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ್ದರು. ಯಾವ ಕಾರಣಕ್ಕೆ ಬೆಂಕಿ ಎಲ್ಲಿಂದ ಹತ್ತಿಕೊಂಡಿದೆ ಎಂದು ಖಚಿತವಾಗಿ ತಿಳಿದು ಬಂದಿಲ್ಲ ಶಾರ್ಟ್ ಶಾರ್ಕ್ಯೂಟ್ ನಿಂದ ಅವಘಡ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.