ನವದೆಹಲಿ: ವಿದ್ಯಾರ್ಥಿ ಹೋರಾಟಗಾರ ಅಬು ಸೈಯದ್‌ನ ಹತ್ಯೆಯ ಮಾಸ್ಟರ್‌ಮೈಂಡ್ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ, ಸದ್ಯದಲ್ಲೇ ಅವರಿಗೆ ಕಾನೂನಿನ ಮೂಲಕ ಶಿಕ್ಷೆ ವಿಧಿಸಲಾಗುತ್ತದೆ ಎಂದು ದೇಶವನ್ನುದ್ದೇಶಿಸಿ ಮಾಡಿದ 2ನೇ ವರ್ಚುವಲ್ ಭಾಷಣದಲ್ಲಿ ಹಸೀನಾ ಹೇಳಿದ್ದಾರೆ.
ಉದ್ಯೋಗದಲ್ಲಿ ಮೀಸಲಾತಿ ವಿರೋಧಿ ಪ್ರತಿಭಟನೆ ವೇಳೆ ಅಬು ಸಯ್ಯದ್ ಹತ್ಯೆಯಾಗಿತ್ತು. ಜುಲೈ 16ರಂದು ಬಾಂಗ್ಲಾದೇಶದ ರಂಗ್‌ಪುರದಲ್ಲಿರುವ ಅಲ್ಮಾ ಮೇಟರ್ ಬೇಗಂ ರೋಕೆಯಾ ವಿಶ್ವವಿದ್ಯಾಲಯದ ಎದುರು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಸಾವಿಗೀಡಾಗಿದ್ದರು.
ಬಳಿಕ, ದೇಶದಲ್ಲಿ ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಸೇಖ್ ಹಸೀನಾ ದೇಶ ತೊರೆದಿದ್ದರು. ಬಳಿಕ, ಮಧ್ಯಂತರ ಸರ್ಕಾರದ ಮುಖ್ಯ ಸಲಹಗಾರರಾಗಿ ಮೊಹಮ್ಮದ್ ಯೂನಸ್ ಅವರನ್ನು ನೇಮಕ ಮಾಡಲಾಗಿತ್ತು.
ಈ ವರ್ಷದ ಜುಲೈ ಮತ್ತು ಆಗಸ್ಟ್‌ನಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಹಲವು ವಿದ್ಯಾರ್ಥಿಗಳು ಮತ್ತು ಮೀಸಲಾತಿ ವಿರೋಧಿ ಹೋರಾಟಗಾರರ ಹತ್ಯೆ ಆರೋಪ ಎದುರಿಸುತ್ತಿರುವ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಭಾರತಕ್ಕೆ ಮನವಿ ಮಾಡಲಾಗುವುದು ಎಂದು ಮಧ್ಯಂತರ ಸರ್ಕಾರವು ಹೇಳಿದ ಬೆನ್ನಲ್ಲೇ ವಾರದಲ್ಲಿ ಎರಡನೇ ಸಲ ಹಸೀನಾ ಅವರು, ಯೂನಸ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.
ನಾನು ಬಾಂಗ್ಲಾದೇಶದ ಪ್ರಧಾನಿಯಾಗಿದ್ದಾಗ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಲು ಎಂದಿಗೂ ಆದೆಶಿಸಿರಲಿಲ್ಲ. ಬದಲಿಗೆ ಗುಂಪು ಚದುರಿಸಲು ರಬ್ಬರ್ ಬುಲೆಟ್ ಪ್ರಯೋಗಿಸಲಾಗಿತ್ತು ಎಂದು ಅವರು ಸ್ಪಷ್ಡಪಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಯೂನಸ್ ಮತ್ತು ಅವರ ಸರ್ಕಾರವನ್ನು ಹಸೀನಾ ಟೀಕಿಸಿದ್ದಾರೆ. ಯೂನಸ್ ಅವರನ್ನು ಕಾನೂನಿನ ಅಡಿಯಲ್ಲಿ ತಂದು ಶಿಕ್ಷೆ ನೀಡಲಾಗುವುದು. ಶೀಘ್ರದಲ್ಲೇ ಆಗುವ ಹೊಸ ಉದಯವು ತನ್ನ ದೇಶದಲ್ಲಿನ ಕತ್ತಲೆಯನ್ನು ಕೊನೆಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.
ಹಸೀನಾ ದೇಶಬಿಟ್ಟ ಬಳಿಕ ಪ್ರತಿಭಟನಾಕಾರರ ಹತ್ಯೆ, ಅಪಹರಣ ಮುಂತಾದ ಅಪರಾಧ ಪ್ರಕರಣಗಳಲ್ಲಿ ಅವರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.
ಹಸೀನಾ ವಿರುದ್ಧದ ಪ್ರಕರಣಗಳ ವಿಚಾರಣೆ ಒಂದು ಹಂತ ತಲುಪಿದಾಗ ನ್ಯಾಯಾಲಯದಲ್ಲಿ ಆಕೆ ಖುದ್ದು ಹಾಜರಿರಬೇಕಾದ ಅಗತ್ಯ ಬರಲಿದೆ. ಹಾಗಾಗಿ, ಅವರ ಹಸ್ತಾಂತರಕ್ಕೆ ಭಾರತಕ್ಕೆ ಮನವಿ ಮಾಡಲಾಗುವುದು ಎಂದು ಮಧ್ಯಂತರ ಸರ್ಕಾರ ಹೇಳಿತ್ತು.