ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಶನಿವಾರ ಮುಂಜಾನೆ ಮೈನಸ್ 8.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ಕಳೆದ ಮೂರು ದಶಕಗಳಲ್ಲಿ ಡಿಸೆಂಬರ್‌ನಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನವಾಗಿದೆ.
'ಶ್ರೀನಗರದಲ್ಲಿ 1990ರ ಬಳಿಕ, ಡಿಸೆಂಬರ್ ತಿಂಗಳಿನಲ್ಲಿ ದಾಖಲಾದ ಅತಿ ಕನಿಷ್ಠ ಹಾಗೂ ಕಳೆದ 133 ವರ್ಷಗಳಲ್ಲಿ ದಾಖಲಾಗಿರುವ ಮೂರನೇ ಅತಿ ಕಡಿಮೆ ತಾಪಮಾನ ಇದಾಗಿದೆ.
ಅಮರನಾಥ ಯಾತ್ರೆಯ ಬೇಸ್‌ಕ್ಯಾಂಪ್‌ಗಳಲ್ಲಿ ಒಂದಾಗಿರುವ ಪಹಾಲ್‌ಗಾಮ್‌ನಲ್ಲಿ ಮೈನಸ್ 8.6 ಡಿ.ಸೆ., ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಮೈನಸ್ 10.4 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಅನಂತ್‌ನಾಗ್‌ನಲ್ಲಿ ಮೈನಸ್ 10.5 ಡಿ.ಸೆ. ತಾಪಮಾನ ದಾಖಲಾಗಿದ್ದು, ಕಾಶ್ಮೀರದಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನವಾಗಿದೆ.
ಈ ತಿಂಗಳ ಅಂತ್ಯದವರೆಗೆ ಶುಷ್ಕ ವಾತಾವರಣ ಇರಲಿದ್ದು, ಶೀತಗಾಳಿ ಇರುವ ಕಾರಣ ತಾಪಮಾನ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರವು ಭಾಗಶಃ ಹೆಪ್ಪುಗಟ್ಟಿದ್ದು ತರಕಾರಿ ವ್ಯಾಪಾರಿಯೊಬ್ಬರು ದೋಣಿಯಲ್ಲಿ ಶನಿವಾರ ಸಾಗಿದರು
'ಚಿಲ್ಲೈ-ಕಲನ್' ಆರಂಭ:
ಜಮ್ಮು ಮತ್ತು ಕಾಶ್ಮೀರದಲ್ಲಿ ಚಿಲ್ಲೈ-ಕಲನ್ ('ಚಿಲ್ಲೈ' ಮಾರುತದಿಂದಾಗಿ ತಾಪಮಾನ ವಿಪರೀತ ಇಳಿಕೆಯಾಗಿ, ಹಿಮಪಾತ ಸಂಭವಿಸಬಹುದಾದ 40 ದಿನಗಳ ಋತು) ಶನಿವಾರದಿಂದ ಆರಂಭವಾಗಿದೆ. ಶ್ರೀನಗರದ ಬಳಿಯಿರುವ ದಾಲ್ ಸರೋವರವೂ ಸೇರಿದಂತೆ ಜಲಮೂಲಗಳು ವಿಪರೀತ ಚಳಿಯಿಂದಾಗಿ ಭಾಗಶಃ ಹೆಪ್ಪುಗಟ್ಟಿವೆ. ಶ್ರೀನಗರವೂ ಸೇರಿ ಕಾಶ್ಮೀರದೆಲ್ಲೆಡೆ ಮಂಜು ಆವರಿಸಿದೆ. ತಾಪಮಾನ ತೀವ್ರ ಇಳಿಕೆಯಿಂದಾಗಿ ನೀರು ಘನೀಕರಿಸಿರುವ ಕಾರಣ, ನೀರು ಸರಬರಾಜು ವ್ಯವಸ್ಥೆಗೂ ತೊಡಕುಂಟಾಗಿದೆ. ದಾಲ್ ಸರೋವರವು 1965 ಹಾಗೂ 1986ರಲ್ಲಿ ಸಂಪೂರ್ಣವಾಗಿ ಹೆಪ್ಪುಗಟ್ಟಿತ್ತು.
ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರವು ಭಾಗಶಃ ಹೆಪ್ಪುಗಟ್ಟಿದ್ದು, ವಲಸೆ ಹಕ್ಕಿಗಳು ಘನೀಕೃತ ನೀರಿನ ಮೇಲೆ ಆಹಾರ ಅರಸಿ ಶನಿವಾರ ಅಲೆದಾಡಿದವು