ನವದೆಹಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಸೋಮವಾರ ಅಧಿಕಾರ ವಹಿಸಿಕೊಂಡರು.
ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು, 'ಮಾನವ ಹಕ್ಕುಗಳು ಎನ್ನುವುದು ಭಾರತದ ಸಂಸ್ಕೃತಿಯಲ್ಲೇ ಆಳವಾಗಿ ಬೇರೂರಿದೆ.
ಇವುಗಳನ್ನು ರಕ್ಷಿಸಿ, ಉಳಿಸಿ ಬೆಳೆಸಲು ಸಮಾಜದ ಪ್ರತಿಯೊಬ್ಬರ ಪಾಲುದಾರಿಕೆ ಅಗತ್ಯ' ಎಂದರು. ತಮಿಳಿನ ಮಹಾಕವಿ ತಿರುವಳ್ಳುವರ್ ಅವರು ಮಾನವ ಹಕ್ಕುಗಳ ಕುರಿತು ಹೇಳಿದ ಮಾತುಗಳನ್ನು ಉಲ್ಲೇಖಿಸಿದರು.
ಆಯೋಗದ ಅಧ್ಯಕ್ಷ ಸ್ಥಾನಕ್ಕೆ ನ್ಯಾ. ರಾಮಸುಬ್ರಮಣಿಯನ್ ಅವರ ಹೆಸರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿ. 21ರಂದು ಅಂತಿಮಗೊಳಿಸಿದ್ದರು. ಕೇಂದ್ರ ಸರ್ಕಾರವು ಡಿ. 23ರಂದು ಹೆಸರು ಪ್ರಕಟಿಸಿತು. ನ್ಯಾ. ಬಿದ್ಯುತ್ ರಂಜನ್ ಸಾರಂಗಿ ಅವರು ಆಯೋಗದ ಸದಸ್ಯರಾಗಿದ್ದಾರೆ.
ವಿ. ರಾಮಸುಬ್ರಮಣಿಯನ್ ಅವರು 1958ರ ಜೂನ್ 30ರಂದು ತಮಿಳುನಾಡಿನ ಮನ್ನಾರಗುಡಿಯಲ್ಲಿ ಜನಿಸಿದರು. ಚೆನ್ನೈನ ರಾಮಕೃಷ್ಣ ಮಿಷನ್‌ನ ವಿವೇಕಾನಂದ ಕಾಲೇಜಿನಲ್ಲಿ ರಸಾಯನವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ., ಮದ್ರಾಸ್ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು. ಮದ್ರಾಸ್ ಹೈಕೋರ್ಟ್‌ನಲ್ಲಿ ಸುಮಾರು 23 ವರ್ಷ ವಕೀಲರಾಗಿದ್ದರು.
2006ರಲ್ಲಿ ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ವಕೀಲರಾಗಿ ನೇಮಕಗೊಂಡರು. ತೆಲಂಗಾಣ ಮತ್ತು ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ. ಹಿಮಾಚಲಪ್ರದೇಶದ ಹೈಕೊರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ, ನಂತರ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
2016ರ ನೋಟು ಅಮಾನ್ಯೀಕರಣ ಪ್ರಕರಣ ಒಳಗೊಂಡಂತೆ 102 ಪ್ರಕರಣಗಳಲ್ಲಿ ರಾಮಸುಬ್ರಮಣಿಯ ತೀರ್ಪು ನೀಡಿದ್ದಾರೆ. ಆಯೋಗದ ಅಧ್ಯಕ್ಷರಾಗಿರುವ ನ್ಯಾ. ಅರುಣ್ ಕುಮಾರ್ ಮಿಶ್ರಾ ಅವರ ಅಧಿಕಾರಾವಧಿಯು ಜೂನ್ 1ಕ್ಕೆ ಕೊನೆಯಾಗಲಿದೆ. ಇವರಿಗೂ ಮೊದಲು ನ್ಯಾ. ಎಚ್.ಎಲ್. ದತ್ತು ಹಾಗೂ ಕೆ.ಜಿ.ಬಾಲಕೃಷ್ಣನ್ ಅಧ್ಯಕ್ಷರಾಗಿದ್ದರು.
ಆಯೋಗದ ಮಂದಿನ ಅಧ್ಯಕ್ಷರ ಆಯ್ಕೆ ಕುರಿತು ಡಿ. 18ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು.