ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕರೊಬ್ಬರ ಪುತ್ರಿಯೊಂದಿಗೆ ತನ್ನ ಮಗ ಮದುವೆಯಾಗಿದ್ದಕ್ಕೆ ಬಿಎಸ್‌ಪಿಯ ನಾಯಕರೊಬ್ಬರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂಬ ವರದಿಗಳನ್ನು ಪಕ್ಷದ ಮುಖ್ಯಸ್ಥೆ ಮಾಯಾವತಿ ತಳ್ಳಿಹಾಕಿದ್ದಾರೆ.
'ಬಿಎಸ್‌ಪಿ ಕಾರ್ಯಕರ್ತರು ಪಕ್ಷದ ಎಲ್ಲೆ ಮೀರಿ ಯಾರನ್ನು ಬೇಕಾದರೂ ಮದುವೆಯಾಗಲು ಸ್ವತಂತ್ರರು' ಎಂದು ಅವರು ಪ್ರತಿಪಾದಿಸಿದ್ದಾರೆ.
ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಂಪುರ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಸುರೇಂದ್ರ ಸಾಗರ್ ಅವರ ಪುತ್ರ ಈಚೆಗೆ ಅಂಬೇಡ್ಕರ್ ನಗರ ಜಿಲ್ಲೆಯ ಅಲಾಪುರದ ಎಸ್‌ಪಿ ಶಾಸಕ ತ್ರಿಭುವನ್ ದತ್ ಅವರ ಪುತ್ರಿಯನ್ನು ವಿವಾಹವಾಗಿದ್ದಾರೆ. ದತ್ ಅವರು ಈ ಹಿಂದೆ ಬಿಎಸ್‌ಪಿಯಲ್ಲಿ ಇದ್ದರು. ಆದರೆ, 2022ರ ವಿಧಾನಸಭೆ ಚುನಾವಣೆಯ ಮೊದಲು ಅವರು ಎಸ್‌ಪಿ ಸೇರಿದರು.
ಶುಕ್ರವಾರ ರಾತ್ರಿ 'ಎಕ್ಸ್'ನಲ್ಲಿ ಮಾಡಿರುವ ಸರಣಿ ಪೋಸ್ಟ್‌ಗಳಲ್ಲಿ ಮಾಯಾವತಿ ಅವರು, 'ಮಾಜಿ ಅಧ್ಯಕ್ಷ ಸುರೇಂದ್ರ ಸಾಗರ್ ಮತ್ತು ಪಕ್ಷದ ರಾಂಪುರ ಹಾಲಿ ಜಿಲ್ಲಾಧ್ಯಕ್ಷ ಪ್ರಮೋದ್ ಕುಮಾರ್ ಅವರ ನಡುವಿನ ವಿವಾದದ ಕಾರಣ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಇಬ್ಬರ ನಡುವಿನ ಜಗಳ ತಾರಕಕ್ಕೇರಿದ್ದು, ಇದು ಪಕ್ಷದ ಕಾರ್ಯ ಚಟುವಟಿಕೆಗಳಿಗೆ ಅಡ್ಡಿಯಾಯಿತು. ಹಾಗಾಗಿ, ಇಬ್ಬರನ್ನೂ ಉಚ್ಚಾಟಿಸಲಾಗಿದೆ. ಮದುವೆಗೂ, ಇದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.
'ಪಕ್ಷವು ಕಾರ್ಯಕರ್ತರ ವೈಯಕ್ತಿಕ ಸಂಬಂಧಗಳ ಬಗ್ಗೆ ಚಿಂತಿಸುವುದಿಲ್ಲ. ಯಾರನ್ನು ಬೇಕಾದರೂ ಮದುವೆಯಾಗಲು ಸ್ವತಂತ್ರರು. ಅದು ಅವರ ಆಲೋಚನೆಗೆ ಬಿಟ್ಟಿದ್ದು. ಆದರೆ ಈ ಬಗ್ಗೆ ಸುಳ್ಳು ಪ್ರಚಾರ ಮಾಡುವವರ ಬಗ್ಗೆ ಜಾಗರೂಕರಾಗಿರಬೇಕು' ಎಂದು ಮಾಯಾವತಿ ಅವರು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, 'ಪಕ್ಷದ ಮಾಜಿ ಸಂಸದ ಮಂಖಡ್ ಅಲಿ ಅವರ ಪುತ್ರನ ವಿವಾಹದಲ್ಲಿ ಕಾರ್ಯಕರ್ತರು ಭಾಗವಹಿಸದಂತೆ ನಿರ್ಬಂಧಿಸಿದ್ದು ಅಲಿ ಅವರ ಪುತ್ರಿ ಸುಂಬುಲ್ ರಾಣಾ ಮೀರಾಪುರದಲ್ಲಿ ಎಸ್‌ಪಿ ಟಿಕೆಟ್‌ನಲ್ಲಿ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಿದ ಕಾರಣಕ್ಕೆ. ಈ ಕ್ಷೇತ್ರದಲ್ಲಿ ಬಿಎಸ್‌ಪಿ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಅಂತಹ ಪರಿಸ್ಥಿತಿಯಲ್ಲಿ, ಮದುವೆಯಲ್ಲಿ ಎರಡೂ ಪಕ್ಷದವರು ಸೇರಿದರೆ ಅವರ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಇತ್ತು. ಹೀಗಾಗಿ, ಅಂತಹ ಕ್ರಮ ತೆಗೆದುಕೊಂಡೆವು. ಆದರೆ, ಅದನ್ನು ಪ್ರಚಾರ ಮಾಡುತ್ತಿರುವ ರೀತಿ ಸರಿಯಿಲ್ಲ' ಎಂದು ಮಾಯಾವತಿ ಹೇಳಿದ್ದಾರೆ.
ಸುಂಬುಲ್ ರಾಣಾ ಅವರು ಮಾಜಿ ಸಂಸದ ಖಾದಿರ್ ರಾಣಾ ಅವರ ಪುತ್ರ ಶಾ ಮೊಹಮ್ಮದ್ ಅವರನ್ನು ವಿವಾಹವಾಗಿದ್ದಾರೆ.
ಮೀರಾಪುರ ಕ್ಷೇತ್ರದ ಉಪಚುನಾವಣೆಯಲ್ಲಿ ರಾಷ್ಟ್ರೀಯ ಲೋಕದಳದ ಮಿಥ್ಲೇಶ್ ಪಾಲ್ ಗೆಲುವು ಸಾಧಿಸಿದ್ದಾರೆ.