ಬರೇಲಿ: ಲೋಕಸಭಾ ಚುನಾವಣೆ ವೇಳೆ ಆರ್ಥಿಕ ಸಮೀಕ್ಷೆ ಕುರಿತಾದ ಹೇಳಿಕೆ ಕುರಿತಂತೆ ವಿಚಾರಣೆಗೆ ಹಾಜರಾಗಲು ಉತ್ತರ ಪ್ರದೇಶದ ರಾಯ್ ಬರೇಲಿ ನ್ಯಾಯಾಲಯವು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸುಧೀರ್ ಕುಮಾರ್, ರಾಹುಲ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
ಅಖಿಲ ಭಾರತ ಹಿಂದೂ ಮಹಾಸಂಘದ ಮಂಡಲ ಅಧ್ಯಕ್ಷ ಪಂಕಜ್ ಪಾಠಕ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸಮನ್ಸ್ ನೀಡಿದೆ.
ಮೊದಲಿಗೆ ಶಾಸಕರು ಮತ್ತು ಸಂಸದರು ನ್ಯಾಯಾಲಯದಲ್ಲಿ ಪಾಠಕ್ ಅರ್ಜಿ ಸಲ್ಲಿಸಿದ್ದರು. ಆದರೆ, ರಾಹುಲ್ ವಿರುದ್ಧ ಮೊಕದ್ದಮೆ ದಾಖಲಿಸಲು ನ್ಯಾಯಾಲಯ ನಿರಾಕರಿಸಿದ ಹಿನ್ನೆಲೆ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು.
'ದೇಶದಲ್ಲಿ ದುರ್ಬಲ ವರ್ಗದವರೇ ಅತಿ ಹೆಚ್ಚಿನ ಪ್ರಮಾಣದಲ್ಲಿದ್ದರೂ ಅವರು ಹೊಂದಿರುವ ಆಸ್ತಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಇದು ಹೀಗೆ ಮುಂದುವರಿದರೆ ಅತಿ ಹೆಚ್ಚು ಜನಸಂಖ್ಯೆ ಇರುವ ಜನ ಹೆಚ್ಚಿನ ಆಸ್ತಿಗೆ ಬೇಡಿಕೆ ಇಡಬೇಕಾಗುತ್ತದೆ ಎಂದು ಹೇಳುವ ಮೂಲಕ ದುರ್ಬಲ ವರ್ಗದವರಲ್ಲಿ ದ್ವೇಷ ಮತ್ತು ಶತ್ರುತ್ವದ ವಿಷ ಬೀಜ ಬಿತ್ತಲು ಯತ್ನಿಸಿದ್ದರು'ಎಂದು ವಕೀಲ ವೀರೇಂದ್ರ ಪಾಲ್ ಗುಪ್ತಾ ಆರೋಪಿಸಿದ್ದಾರೆ.