ಪುಣೆ: ಹೊಸ ವರ್ಷಾಚರಣೆಗೆ ಗ್ರಾಹಕರನ್ನು ಆಹ್ವಾನಿಸಿರುವ ಪುಣೆಯ ಪಬ್ ಒಂದು ಆಹ್ವಾನ ಪತ್ರಿಕೆಯೊಂದಿಗೆ ಕಾಂಡೊಮ್ ಮತ್ತು ಒಆರ್‌ಎಸ್ ಪೊಟ್ಟಣವನ್ನು ಕಳುಹಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಮಹಾರಾಷ್ಟ್ರದ ಯುವ ಕಾಂಗ್ರೆಸ್ ಘಟಕವು ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಮೂವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಪಬ್ ಕಳುಹಿಸಿರುವ ಆಹ್ವಾನಪತ್ರಿಕೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಈ ಕುರಿತು ಪುಣೆ ನಗರ ಪೊಲೀಸ್ ಆಯುಕ್ತ ಅಮತೇಶ್ ಕುಮಾರ್ ಅವರನ್ನು ಭೇಟಿ ಮಾಡಿದ ಯುವ ಕಾಂಗ್ರೆಸ್ ಘಟಕದ ಸದಸ್ಯರು ದೂರು ನೀಡಿದ್ದಾರೆ. ಪಬ್ ವ್ಯವಸ್ಥಾಪಕ ಮಂಡಳಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
'ಪಬ್ ಹಾಗೂ ನೈಟ್‌ಲೈಫ್ ವಿರೋಧಿಗಳು ನಾವಲ್ಲ. ಆದರೆ, ಯುವ ಸಮುದಾಯವನ್ನು ಸೆಳೆಯುವ ಸಲುವಾಗಿ ಅವರ ದಾರಿತಪ್ಪಿಸುವ ಮಾರ್ಕೆಟಿಂಗ್ ತಂತ್ರವನ್ನು ಹೂಡಿರುವ ಪಬ್, ಪುಣೆಯ ಸಂಸ್ಕೃತಿಯನ್ನು ಹಾಳು ಮಾಡಿದೆ. ಈ ಕುರಿತು ಕಠಿಣ ಕ್ರಮ ಜರುಗಿಸಬೇಕು' ಎಂದು ಯುವ ಕಾಂಗ್ರೆಸ್ ಮುಖಂಡ ಅಕ್ಷಯ್ ಜೈನ್ ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, 'ಭಾನುವಾರ ದೂರು ದಾಖಲಾಗಿದೆ. ಆಹ್ವಾನಿತರಲ್ಲಿ ಹಲವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ' ಎಂದಿದ್ದಾರೆ.