ಬದಿಯಡ್ಕ: ಜನಪ್ರಿಯ ಕಥೆಗಾರ ಜನಾರ್ದನ ಎರ್ಪಕಟ್ಟೆಯವರು ತಮ್ಮ ಕಥೆಗಳಲ್ಲಿ ದಲಿತರ ಸಾಂಸ್ಕøತಿಕ ಲೋಕವನ್ನುವ ಅನಾವರಣಗೊಳಿಸಿರುವರು. ದಲಿತರ ಬದುಕಿನ ನೋವು - ನಲಿವುಗಳನ್ನು ಮತ್ತು ವಿವಿಧ ಮಜಲುಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಅವುಗಳಲ್ಲಿ ಆಡಂಬ-ಘರ್ಷಣೆಗಳಿಲ್ಲ. ವಂಚನೆ-ವಾದಗಳಿಲ್ಲ . ಅವರ ಕಥನ ಕ್ರಿಯೆಯಲ್ಲಿ ಭಾವನೆ, ಚಿಂತನೆ, ಸಾಮಾಜಿಕ, ಸಾಮುದಾಯಿಕ ಪ್ರಜ್ಞೆಯನ್ನು ಗುರುತಿಸಬಹುದು ಎಂದು ಉಪನ್ಯಾಸಕ, ಸಂಶೋಧಕ ಸುದೀಶ್ ವಿಜಾರು ಹೇಳಿದ್ದಾರೆ.
ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಶನಿವಾರ ಜರಗಿದ 'ಜನಾರ್ದನ ಏರ್ಪಕಟ್ಟೆ ನೆನಪು' ಕಾರ್ಯಕ್ರಮದಲ್ಲಿ ಏರ್ಪಕಟ್ಟೆಯವರು ಕಥಾವಲೋಕನ ಮಾಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇರಳ ರಾಜ್ಯ ಪ್ರಶಸ್ತಿ ಪುರಸ್ಕøತ ಅಧ್ಯಾಪಕ, ಲೇಖಕ ನಾರಾಯಣ ದೇಲಂಪಾಡಿ ಅಧ್ಯಕ್ಷತೆ ವಹಿಸಿದ್ದರು. ದಲಿತ ಲೇಖಕರು ದಲಿತರೊಳಗಿದ್ದುಕೊಂಡು ಅನುಭವಜನ್ಯ ಸಾಹಿತ್ಯವನ್ನು ಅವರದ್ದೇ ಭಾಷೆಯಲ್ಲಿ ನೀಡಿದಾಗ ಆ ಸಾಹಿತ್ಯ ವಿಶಿಷ್ಟವಾಗುತ್ತದೆ ಎನ್ನುವುದಕ್ಕೆ ಏರ್ಪಕಟ್ಟೆಯವರ ಕೃತಿಗಳೇ ಸಾಕ್ಷಿ. ಕಥೆಗಳ ಮೂಲಕ ಕನ್ನಡವನ್ನು ಸಂಪನ್ನಗೊಳಿಸಿದ ಜನಾರ್ದನರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ನಾರಾಯಣ ದೇಲಂಪಾಡಿ ನುಡಿದರು.
ಪತ್ರಕರ್ತ ರಮೇಶ ಮಂಜೇಶ್ವರ ಮತ್ತು ಏರ್ಪಕಟ್ಟೆಯವರ ನಿಡುಗಾಲದ ಒಡನಾಡಿ ಐತ್ತ ಮಾನ್ಯ ಅವರು ಏರ್ಪಕಟ್ಟೆಯವರ ವ್ಯಕ್ತಿತ್ವ ಮತ್ತು ಕತೃತ್ವ ಶಕ್ತಿಯ ಬಗ್ಗೆ ಬೆಳಕು ಚೆಲ್ಲಿದರು. ಬಹುಮುಖ ಪ್ರತಿಭಾನ್ವಿತೆ ಆಶ್ರಯ ಎಸ್ ಬೇಳ ಅವರಿಗೆ 'ಎರ್ಪಕಟ್ಟೆ ಪ್ರತಿಭಾ ಪುರಸ್ಕಾರ' ನೀಡಲಾಯಿತು. ಸಾಹಿತಿ, ಪತ್ರಕರ್ತ ರಾಧಾಕೃಷ್ಣ.ಕೆ.ಉಳಿಯತ್ತಡ್ಕ ಶುಭ ಹಾರೈಸಿದರು.
ಪೆರ್ಮುಖ ಈಶ್ವರ ಭಟ್ ಅವರು ಎರ್ಪಕಟ್ಟೆಯವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಶಾರದಾ ಎರ್ಪಕಟ್ಟೆ ಉಪಸ್ಥಿತರಿದ್ದರು. ಅಂಬೇಡ್ಕರ್ ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಜಯಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಅಧ್ಯಕ್ಷ ರಾಮ ಪಟ್ಚಾಜೆ ವಂದಿಸಿದರು.
ಸಾಹಿತಿ ಪತ್ರಕರ್ತ ಪುರುμÉೂೀತ್ತಮ ಭಟ್ ಕೆ. ಪುದುಕೋಳಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಕಥಾಗೋಷ್ಠಿಯನ್ನು ಹಿರಿಯ ಸಾಹಿತಿ, ಕಲಾವಿದ ವೆಂಕಟ ಭಟ್ ಎಡನೀರು ಉಧ್ಘಾಟಿಸಿದರು.
ನರಸಿಂಹ ಭಟ್ ಏತಡ್ಕ , ಪುಷ್ಪಿತಾ ತಲೆಬೈಲು , ಅಕ್ಷತಾ ಭಟ್ ಪುದುಕೋಳಿ, ಕು. ದೀಕ್ಷಾ .ಎಸ್.ಪಿ., ಗ್ರೀಷ್ಮಾ .ಬಿ, ಕು. ಮನ್ವಿತಾ .ಕೆ, ಸುಮಿತ್ರಾ ಎರ್ಪಕಟ್ಟೆ , ರವೀಂದ್ರನ್ ಪಾಡಿ ಕಥೆಗಳನ್ನು ವಾಚಿಸಿದರು . ಸುಂದರ ಬಾರಡ್ಕ ಮತ್ತು ವನಜಾಕ್ಷಿ ಚೆಂಬ್ರಕಾನ ಗೋಷ್ಠಿಯನ್ನು ನಿರೂಪಿಸಿದರು. ಉದಯಕುಮಾರ್ ಮುಂಡೋಡು ವಂದಿಸಿದರು.