ಮಂಡ್ಯ: 'ಕನ್ನಡ ಎದುರಿಸುತ್ತಿರುವ ಬಿಕ್ಕಟ್ಟುಗಳ ನಿವಾರಣೆಗೆ ಚೈನಾ ಸೇರಿದಂತೆ ಕೆಲವು ವಿದೇಶಗಳಲ್ಲಿ ಪರಿಹಾರಗಳಿವೆ. ಭಾಷೆ ಸಂರಕ್ಷಣೆಯಲ್ಲಿ ಚೈನಾ ಉತ್ತಮ ಮಾದರಿ' ಎಂದು ಬ್ರಿಟನ್ ಕನ್ನಡಿಗರ ಕೂಟದ ಅಶ್ವಿನ್ ಶೇಷಾದ್ರಿ ಅಭಿಪ್ರಾಯಪಟ್ಟರು.
ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಭಾನುವಾರ 'ಜಾಗತಿಕ ಮಟ್ಟದಲ್ಲಿ ಕನ್ನಡ ಕಟ್ಟುವ ಬಗೆ' ಗೋಷ್ಠಿಯಲ್ಲಿ ಮಾತನಾಡಿ, 'ಚೀನಾ ಭಾಷೆಯ ಚಿತ್ರಲಿಪಿಯಲ್ಲಿರುವುದು 2 ಸಾವಿರ ಪದಗಳಷ್ಟೆ.
'ಅಮೆರಿಕದ ದಕ್ಷಿಣಕ್ಕಿರುವ ಮೆಕ್ಸಿಕೊ ಹಲವು ಶತಮಾನ ಸ್ಪಾನಿಷರ ಆಳ್ವಿಕೆಯಲ್ಲಿತ್ತು. ಆಡಳಿತ ಭಾಷೆಯೂ ಸ್ಪಾನಿಷ್. ಆದರೆ ಅಲ್ಲಿರುವ 68 ಪ್ರಮುಖ ಸ್ಥಳೀಯ ಭಾಷಾ ಸಮುದಾಯಗಳು ತಮ್ಮ ಭಾಷೆಯನ್ನು ಬಿಟ್ಟುಕೊಡುವುದಿಲ್ಲವೆಂದು ಚಳವಳಿ ನಡೆಸಿದವು. ಈಗ ಜನರ ಅರ್ಜಿ, ಪತ್ರಗಳನ್ನು ಸರ್ಕಾರವೇ ಸ್ಪಾನಿಷ್‌ಗೆ ಭಾಷಾಂತರಿಸುತ್ತದೆ. ಐರೋಪ್ಯ ದೇಶಗಳು, ನ್ಯೂಜಿಲೆಂಡ್, ಆಸ್ಟ್ರೇಲಿಯದಲ್ಲಿ ಸ್ಥಳೀಯ ಭಾಷೆಗಳ ಬಳಕೆ ಚಳವಳಿಯ ರೂಪ ಪಡೆದಿದೆ. ಇವೆಲ್ಲವೂ ನಮಗೆ ಸ್ಫೂರ್ತಿಯಾಗಬಲ್ಲವು' ಎಂದು ವಿವರಿಸಿದರು.
ಕನ್ನಡ ಕಲಿಕಾ ಕೇಂದ್ರಗಳು: 'ವಿದೇಶಗಳಲ್ಲಿ ಹಲವು ಕನ್ನಡ ಕಲಿಕಾ ಕೇಂದ್ರಗಳಿದ್ದು, 5,866 ವಿದ್ಯಾರ್ಥಿಗಳಿಗೆ 720 ಶಿಕ್ಷಕರು ಕನ್ನಡ ಕಲಿಸುತ್ತಿದ್ದಾರೆ' ಎಂದು ದುಬೈ ಕನ್ನಡ ಶಾಲೆಯ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಮಾಹಿತಿ ನೀಡಿದರು.
'ವಿದೇಶಗಳಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿಗಳು' ಕುರಿತು ಮಾತನಾಡಿ, 'ನಮ್ಮ ಮಕ್ಕಳು ಕನ್ನಡ ಮರೆಯಬಾರದೆಂದು ಶಾಲೆ ಆರಂಭಿಸಿದೆವು. 11 ವರ್ಷಗಳಲ್ಲಿ ಸಾವಿರಾರು ಮಕ್ಕಳಿಗೆ ಕನ್ನಡ ಕಲಿಸಿದ್ದೇವೆ. ಆದರೆ ಇಲ್ಲಿನವರು ಮಕ್ಕಳಿಗೆ ಕನ್ನಡ ಕಲಿಸಲು ಆಸಕ್ತಿ ತೋರದಿರುವುದು ವಿಷಾದನೀಯ' ಎಂದರು.
ಜರ್ಮನಿಯ ಮ್ಯೂನಿಕ್‌ನ ಕನ್ನಡ ಕಲಿಕಾ ಕೇಂದ್ರದ ಶಿಕ್ಷಕಿ ರಶ್ಮಿ ನಾಗರಾಜ್, 'ನಾವು ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳ ಮೂಲಕ ಕನ್ನಡ ಕಲಿಸುತ್ತಿದ್ದು, ಜರ್ಮನಿಯ ಸಾಮಾನ್ಯ ಶಾಲಾ ಪ್ರಮಾಣಪತ್ರದಲ್ಲಿ 'ಹಿಂದಿ ಭಾಷೆ ಕಲಿಕೆ' ಎಂದು ನಮೂದಿಸುವ ವ್ಯವಸ್ಥೆ ಇದೆ. ಕನ್ನಡ ಭಾಷೆ ಕಲಿಕೆಗೂ ಈ ಸವಲತ್ತು ವಿಸ್ತರಿಸುವ ಬಗ್ಗೆ ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸುತ್ತಿದ್ದೇವೆ' ಎಂದರು.
'ಜಾಗತಿಕ ಮಟ್ಟದಲ್ಲಿ ಕನ್ನಡ ಕಟ್ಟುವ ಬಗೆ' ಗೋಷ್ಠಿಯಲ್ಲಿ ಅಮೆರಿಕದ ಕನ್ನಡ ಕೂಟಗಳ ಪ್ರತಿನಿಧಿ ಅಮರನಾಥ ಗೌಡ ಅವರು ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರ ಜತೆ ಮಾತುಕತೆಯಲ್ಲಿ ತೊಡಗಿದ್ದರು -ಪ್ರಜಾವಾಣಿ ಚಿತ್ರ
'ಅನಿವಾಸಿ ಶ್ರಮಿಕ ಕನ್ನಡಿಗರ ನೆರವಿಗೆ ಧಾವಿಸಿ'
'ಅನಿವಾಸಿ ಕನ್ನಡಿಗರನ್ನು ಅನ್ಯಗ್ರಹ ಜೀವಿಗಳು ಶ್ರೀಮಂತರೆಂದು ನೋಡಲಾಗುತ್ತದೆ. ಆದರೆ ಕೆಲವು ಕೊಲ್ಲಿ ರಾಷ್ಟ್ರಗಳಲ್ಲಿ ಶ್ರಮಿಕ ವರ್ಗದವರ ಜೀವನ ಶೋಚನೀಯವಾಗಿದ್ದು ನೆರವಿಗೆ ಸರ್ಕಾರ ಧಾವಿಸಬೇಕು.ಅವರ ಸ್ಥಿತಿ-ಗತಿ ಕುರಿತ ದಾಖಲೀಕರಣ ನಡೆಸಬೇಕು' ಎಂದು ಕತಾರ್ ಕನ್ನಡಿಗರ ಕೂಟದ ಎಚ್.ಕೆ.ಮಧು ಕಳವಳ ವ್ಯಕ್ತಪಡಿಸಿದರು. 'ಅವರಿಗೆ ಪ್ರತಿ ತಿಂಗಳೂ ವೇತನ ಸಿಗುವುದಿಲ್ಲ. ವಸತಿಯೂ ಶೋಚನೀಯ. ಎರಡು ವರ್ಷಕ್ಕೊಮ್ಮೆಯೂ ಕಂಪನಿಗಳು ಸ್ವದೇಶಕ್ಕೆ ಕಳಿಸುವುದಿಲ್ಲ' ಎಂದರು.