ರಾಯಪುರ: ಇತ್ತೀಚೆಗೆ ನಾಗ್ಪುರದಿಂದ ಕೋಲ್ಕತ್ತಕ್ಕೆ ಪ್ರಯಾಣ ಬೆಳಸುತ್ತಿದ್ದ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಲಾಗಿದ್ದ ವ್ಯಕ್ತಿಯನ್ನು ಗುಪ್ತಚರ ಇಲಾಖೆಯ ಅಧಿಕಾರಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹುಸಿ ಬಾಂಬ್ ಬೆದರಿಕೆ ಸಂಬಂಧ ಮಾಹಿತಿ ನೀಡಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು.
ಈ ವೇಳೆ ಆತ ಗುಪ್ತಚರ ಇಲಾಖೆಯ (ಐಬಿ) ಅಧಿಕಾರಿ ಎಂದು ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತ ವ್ಯಕ್ತಿ ನಾಗ್ಪುರದಲ್ಲಿ ನಿಯೋಜನೆಗೊಂಡ ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಯಾಗಿದ್ದರು. ಇತ್ತೀಚೆಗೆ ನಾಗ್ಪುರದಿಂದ ಕೋಲ್ಕತ್ತಕ್ಕೆ ಪ್ರಯಾಣ ಬೆಳೆಸುತ್ತಿದ್ದ ಇಂಡಿಗೊ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಸಿಬ್ಬಂದಿಗೆ ಮಾಹಿತಿ ನೀಡಿದ್ದನು. ಹೀಗಾಗಿ 187 ಪ್ರಯಾಣಿಕರಿದ್ದ ವಿಮಾನವನ್ನು ರಾಯಪುರಕ್ಕೆ ಮಾರ್ಗ ಬದಲಾವಣೆ ಮಾಡಲಾಯಿತು. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.
ಈ ಸಂಬಂಧ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.