ಲಂಡನ್: ಭಾರತ ಸಂಜಾತೆ, ಗ್ಲಾಸ್ಗೋ ಮೂಲದ ಸ್ಕಾಟಿಷ್ ಸಿಖ್ ಕಲಾವಿದೆ ಜಸ್ಲೀನ್ ಕೌರ್ ಅವರು ಬ್ರಿಟನ್‌ನ ಪ್ರತಿಷ್ಠಿತ ಟರ್ನರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೌರ್ ಅವರು ವೈಯಕ್ತಿಕ, ರಾಜಕೀಯ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ದೃಶ್ಯ ಕಲೆಯ ಮೂಲಕ ಅದ್ಭುತವಾಗಿ ಒಂದು ಸೂತ್ರಕ್ಕೆ ಒಳಪಡಿಸಿ ಪ್ರಸ್ತುತಪಡಿಸಿದ್ದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿಯು ₹26.84 ಲಕ್ಷ ನಗದನ್ನು ಒಳಗೊಂಡಿದೆ.
ಲಂಡನ್‌ನ ಟೆಟ್ ಬ್ರಿಟನ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಕೌರ್‌ಗೆ ಪ್ರಶಸ್ತಿ ವಿತರಿಸಲಾಯಿತು.
ಕೌರ್ ಅವರು 'Alter Altar' (Alter ಎಂದರೆ ಬದಲಾವಣೆಯನ್ನು ಸೂಚಿಸುವ ಕ್ರಿಯಾಪದ. Altar ಎನ್ನುವುದು ಧಾರ್ಮಿಕ ಕಟ್ಟಡದ ವಿನ್ಯಾಸವನ್ನು ಸೂಚಿಸಲು ಬಳಸುವ ನಾಮಪದ. ಎರಡೂ ಪದಗಳನ್ನು 'ಆಲ್ಟರ್' ಎಂದೇ ಉಚ್ಚರಿಸಲಾಗುತ್ತದೆ) ಎಂಬ ಪ್ರದರ್ಶನದಲ್ಲಿ ದಿನಬಳಕೆಯ ವಸ್ತುಗಳಿಗೆ ಧ್ವನಿ ಮತ್ತು ಬೆಳಕಿನ ಮೂಲಕ ಅನಿಮೇಶನ್ ಸ್ಪರ್ಶ ನೀಡಿದ್ದರು.
'ದಿನಬಳಕೆಯ ವಸ್ತುಗಳಿಗೆ ಅನಿಮೇಶನ್ ಮಾಡುವ ಮೂಲಕ ಸಮುದಾಯ ಮತ್ತು ಸಂಸ್ಕೃತಿಯ ಮೌಲ್ಯವನ್ನು ಪ್ರತಿಬಿಂಬಿಸಿದಕ್ಕಾಗಿ ಕೌರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು' ಎಂದು ತೀರ್ಪುಗಾರರು ಹೇಳಿದ್ದಾರೆ.
ಟರ್ನರ್ ಪ್ರಶಸ್ತಿಯು ದೃಶ್ಯ ಕಲಾ ಕ್ಷೇತ್ರದಲ್ಲಿ ನೀಡುವ ವಿಶ್ವದ ಪ್ರತಿಷ್ಠಿತ ಬಹುಮಾನಗಳಲ್ಲಿ ಒಂದಾಗಿದೆ.