HEALTH TIPS

ಸಂಸತ್ ಆವರಣದ ಘರ್ಷಣೆ: ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲು

ನವದೆಹಲಿ: ಗುರುವಾರ ಸಂಸತ್ ಭವನದ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಇಂಡಿಯಾ ಮತ್ತು ಎನ್‌ಡಿಎ ಬಣದ ಸಂಸದರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ(ಬಿಎನ್‌ಎಸ್) ಸೆಕ್ಷನ್ 117 (ಸ್ವಯಂಪ್ರೇರಿತವಾಗಿ ಗಂಭೀರ ಗಾಯವನ್ನು ಉಂಟುಮಾಡುವುದು), 115 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 125 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆ), 131 (ಕ್ರಿಮಿನಲ್ ಬಲ ಪ್ರಯೋಗ), 351 (ಕ್ರಿಮಿನಲ್ ಬೆದರಿಕೆ) ಮತ್ತು 3(5) ಅಡಿಯಲ್ಲಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಗುರುವಾರ, ಸಂಸತ್ತಿನ ಆವರಣದಲ್ಲಿ ನಡೆದ ಘರ್ಷಣೆಯ ಸಂದರ್ಭದಲ್ಲಿ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಮತ್ತು ಪ್ರಚೋದನೆ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿತ್ತು. ಕೊಲೆ ಯತ್ನ ಮತ್ತು ಇತರ ಆರೋಪಗಳ ಅಡಿಯಲ್ಲಿ ರಾಹುಲ್ ವಿರುದ್ಧ ಪ್ರಕರಣ ದಾಖಲಿಸಲು ಕೋರಿತ್ತು.

ಬಿಜೆಪಿ ಸಂಸದ ಹೇಮಂಗ್ ಜೋಶಿ, ಪಕ್ಷದ ಮುಖಂಡರಾದ ಅನುರಾಗ್ ಠಾಕೂರ್ ಮತ್ತು ಬಾನ್ಸುರಿ ಸ್ವರಾಜ್ ಅವರೊಂದಿಗೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ.

ಡಾ.ಬಿ.ಆರ್‌.ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಆಡಳಿತಾರೂಢ ಎನ್‌ಡಿಎ ಹಾಗೂ ವಿಪಕ್ಷ 'ಇಂಡಿಯಾ' ಮೈತ್ರಿಕೂಟ ಸಂಸತ್‌ ಆವರಣದಲ್ಲಿ ಗುರುವಾರ ನಡೆಸಿದ ಪ್ರತ್ಯೇಕ ಪ್ರತಿಭಟನೆಗಳು ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದವು. ತಮ್ಮ ಸಂಸದರ ಮೇಲೆ ಹಲ್ಲೆಗಳನ್ನು ನಡೆಸಲಾಗಿದೆ ಎಂದು ಉಭಯ ಬಣಗಳ ನಾಯಕರು ಆರೋಪ-ಪ್ರತ್ಯಾರೋಪ ಮಾಡಿದರು. ಎರಡೂ ಪಕ್ಷಗಳ ನಾಯಕರು ಪರಸ್ಪರರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರುಗಳನ್ನೂ ದಾಖಲಿಸಿದರು. 'ಗಾಂಧಿ ಕುಟುಂಬದವರು ಕ್ಷಮೆಯಾಚಿಸಬೇಕು' ಎಂದು ಬಿಜೆಪಿ ಸಂಸದರು ಆಗ್ರಹಿಸಿದರೆ, ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ 'ಕೈ' ಸಂಸದರು 'ಜೈ ಭೀಮ್‌' ಎಂಬ ಘೋಷಣೆ ಮೊಳಗಿಸಿದರು.

'ಸಂಸತ್‌ ಭವನದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ನಮ್ಮ ಪಕ್ಷದ ಸಂಸದರನ್ನು ತಳ್ಳಿದ್ದಾರೆ. ಹೀಗಾಗಿ, ಇಬ್ಬರು ಸಂಸದರ ತಲೆಗೆ ಗಾಯಗಳಾಗಿವೆ' ಎಂದು ಬಿಜೆಪಿ ಅರೋಪಿಸಿದೆ. 'ಕಾಂಗ್ರೆಸ್‌ನ ಈ ನಾಯಕ ತುಂಬಾ ಹತ್ತಿರಕ್ಕೆ ಬಂದು ಜೋರಾಗಿ ಕಿರುಚಿದ್ದಾರೆ' ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯೆ ಎಸ್‌.ಫಾಂಗ್ಯಾನ್‌ ಕೊನ್ಯಾಕ್‌ ಆರೋಪಿಸಿದರು.

ಗಾಯಗೊಂಡಿರುವ ಸಂಸದರಾದ ಪ್ರತಾಪ್ ಸಾರಂಗಿ ಹಾಗೂ ಮುಕೇಶ್‌ ರಜಪೂತ್‌ ಅವರನ್ನು ರಾಮ ಮನೋಹರ ಲೋಹಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು.

ಸಂಸತ್‌ನ ಮಕರ ದ್ವಾರದ ಮುಂಭಾಗದಲ್ಲಿ ಪ್ರತಿಭಟನಾನಿರತ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಮುಖಾಮುಖಿಯಾದರು. ಆಗ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ, 'ರಾಹುಲ್‌, ನಿಮಗೆ ನಾಚಿಕೆಯಾಗುವುದಿಲ್ಲವೇ? ನೀವು ರೌಡಿ ವರ್ತನೆ ತೋರಿದ್ದೀರಿ? ವೃದ್ದ ಸಂಸದನನ್ನು ತಳ್ಳಿದ್ದೀರಿ' ಎಂದು ಪ್ರಶ್ನಿಸಿದರು. ರಾಹುಲ್‌ ಪ್ರತಿಕ್ರಿಯಿಸಿ, 'ಅವರು ನನ್ನನ್ನು ತಳ್ಳಿದರು' ಎಂದರು. ಸಾರಂಗಿ ಅವರನ್ನು ನೋಡಿದ ನಂತರ ವಿಪಕ್ಷ ನಾಯಕ ಅಲ್ಲಿಂದ ತೆರಳಿದರು. 'ಸಂಸದರೊಬ್ಬರನ್ನು ರಾಹುಲ್‌ ತಳ್ಳಿದರು. ಅವರು ನನ್ನ ಮೇಲೆ ಬಿದ್ದ ಪರಿಣಾಮ ಗಾಯಗೊಂಡೆ' ಎಂದು ಸಾರಂಗಿ ಸುದ್ದಿಗಾರರಿಗೆ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries