ನವದೆಹಲಿ: ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಮೀಸಲಾಗಿದ್ದ ಆಸನದಲ್ಲಿ ನೋಟಿನ ಕಂತೆ ಪತ್ತೆಯಾಗಿದೆ ಎಂಬ ವಿಷಯವು ಶುಕ್ರವಾರ ರಾಜ್ಯಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಗುರುವಾರ ಸದನದ ಕಲಾಪ ಕೊನೆಗೊಂಡ ಬಳಿಕ ನಡೆದ ಭದ್ರತಾ ತಪಾಸಣೆ ವೇಳೆ ಆಸನ ಸಂಖ್ಯೆ 222ರಲ್ಲಿ ನೋಟುಗಳ ಕಂತೆ ಪತ್ತೆಯಾಗಿದ್ದು, ಅದನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರು ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
'ಸಿಂಘ್ವಿ ಅವರಿಗೆ ಸೇರಿದ ಆಸನದಲ್ಲಿ ನೋಟಿನ ಕಂತೆ ಪತ್ತೆಯಾಗಿದ್ದು, ಈ ವಿಷಯವನ್ನು ಸದನಕ್ಕೆ ತಿಳಿಸುವುದು ನನ್ನ ಕರ್ತವ್ಯವಾಗಿದೆ. ನೋಟುಗಳು ನಕಲಿಯೋ ಅಥವಾ ಅಸಲಿಯೋ ಎಂಬುದು ತಿಳಿದುಬಂದಿಲ್ಲ. ಕಂತೆಯಲ್ಲಿ ₹500ರ ನೂರು ನೋಟುಗಳಿದ್ದವು. ಸದನದ ಶಿಷ್ಟಾಚಾರದಂತೆ ತನಿಖೆಗೆ ಆದೇಶಿಸಲಾಗಿದೆ' ಎಂದು ಧನಕರ್ ಅವರು ಶುಕ್ರವಾರ ಬೆಳಿಗ್ಗೆ ಮಾಹಿತಿ ನೀಡಿದರು.
'ನೋಟುಗಳು ತಮಗೆ ಸೇರಿದ್ದು ಎಂದು ಕೇಳಿಕೊಂಡು ಯಾರಾದರೂ ಬರುತ್ತಾರೆ ಎಂದು ನಿರೀಕ್ಷಿಸುತ್ತಿದ್ದೆ. ಆದರೆ ಇದುವರೆಗೆ ಯಾರೂ ನನ್ನ ಬಳಿ ಬಂದಿಲ್ಲ' ಎಂದರು.
ನೋಟಿನ ಕಂತೆ ದೊರೆತ ವಿಷಯವನ್ನು ಧನಕರ್ ಅವರು ಹೇಳುತ್ತಿದ್ದಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದರು. ತನಿಖೆ ಪೂರ್ಣಗೊಳ್ಳುವ ಮುನ್ನವೇ ಸಭಾಪತಿಯವರು ಸದಸ್ಯರ ಹೆಸರು ಬಹಿರಂಗಪಡಿಸಿದ್ದಕ್ಕೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, 'ಹೆಸರು ಹೇಳಿದ್ದಕ್ಕೆ ಆಕ್ಷೇಪಣೆ ಏಕೆ? ಸಭಾಪತಿಯವರು ಆಸನ ಸಂಖ್ಯೆ ಮತ್ತು ಅದರಲ್ಲಿ ಕುಳಿತುಕೊಳ್ಳುವವರ ಹೆಸರನ್ನು ಹೇಳಿದ್ದಾರೆ. ಅದರಲ್ಲಿ ತಪ್ಪು ಏನಿದೆ' ಎಂದು ಕೇಳಿದರು.
ಮಧ್ಯಾಹ್ನ ವಿರಾಮದ ಬಳಿಕ ಕಲಾಪ ಪುನರಾರಂಭ ಆಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗಿದರಲ್ಲದೆ, ಕಾಂಗ್ರೆಸ್ ಪಕ್ಷ ಇದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿ ಗದ್ದಲ ಎಬ್ಬಿಸಿದರು.
ಸಭಾಪತಿ ಪೀಠದಲ್ಲಿದ್ದ ಹರಿವಂಶ್ ಅವರು ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. 'ಖಾಸಗಿ ಸದಸ್ಯರ ಮಸೂದೆ ಮಂಡನೆಗೆ ಮೀಸಲಾಗಿರುವ ಸಮಯವನ್ನು ನಷ್ಟಮಾಡಬಾರದು' ಎಂದು ಹೇಳಿದರಲ್ಲದೆ ಕಲಾಪದ ಕಾರ್ಯಸೂಚಿಯ ಪ್ರಕಾರ, ಐಯುಎಂಎಲ್ ಸದಸ್ಯ ಅಬ್ದುಲ್ ವಹಾಬ್ ಅವರಲ್ಲಿ ನಿರ್ಣಯ ಮಂಡಿಸುವಂತೆ ತಿಳಿಸಿದರು.
ವಹಾಬ್ ಅವರು ನಿರ್ಣಯ ಓದಲು ಮುಂದಾಗುತ್ತಿದ್ದಂತೆಯೇ, ಆಡಳಿತ ಪಕ್ಷದ ಸದಸ್ಯರು ಜೋರಾಗಿ ಘೋಷಣೆ ಕೂಗಿ ಅಡ್ಡಿಪಡಿಸಿದರು. ಇದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಅಭಿಷೇಕ್ ಮನು ಸಿಂಘ್ವ ಕಾಂಗ್ರೆಸ್ ಸಂಸದಸಂಸದರ ಗೈರುಹಾಜರಿಯಲ್ಲಿ ಅವರ ಆಸನಗಳ ಮೇಲೆ ಗಾಂಜಾ ಇಡದಂತೆ ತಡೆಯಲು ಪ್ರತಿ ಆಸನಕ್ಕೂ ಗಾಜಿನ ಆವರಣ ನಿರ್ಮಿಸಬೇಕು ಜೆ.ಪಿ.ನಡ್ಡಾ ರಾಜ್ಯಸಭೆಯಲ್ಲಿ ಬಿಜೆಪಿ ನಾಯಕಕೆಲವು ವಿಷಯಗಳಲ್ಲಿ ನೀವು (ವಿಪಕ್ಷ) ತನಿಖೆಗೆ ಉತ್ಸಾಹವನ್ನು ತೋರಿಸುತ್ತೀರಿ. ಆದರೆ ಕೆಲವು ವಿಷಯಗಳನ್ನು ಮುಚ್ಚಿಡಲು ಬಯಸುತ್ತೀರಿ
₹500ರ ಒಂದು ನೋಟು ಮಾತ್ರ ಇತ್ತು: ಸಿಂಘ್ವಿ
ತಮ್ಮ ಆಸನದಲ್ಲಿ ನೋಟಿನ ಕಂತೆ ದೊರೆತ ಘಟನೆಯು ಅಚ್ಚರಿ ಉಂಟುಮಾಡಿದೆ ಎಂದಿರುವ ಅಭಿಷೇಕ್ ಮನು ಸಿಂಘ್ವಿ 'ಭದ್ರತಾ ಲೋಪ'ದ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಪ್ರತಿ ಆಸನದ ಸುತ್ತಲೂ ಮುಳ್ಳುತಂತಿ ಹಾಕಬೇಕು ಅಥವಾ ಸಂಸದರು ಮನೆಗೆ ಹೋಗುವ ಮೊದಲು ತಮ್ಮ ಆಸನಕ್ಕೆ ಬೀಗ ಹಾಕಲು ಅನುವು ಮಾಡಿಕೊಡುವಂತೆ ಗಾಜಿನ ಆವರಣ ನಿರ್ಮಿಸಬೇಕು ಎಂದು ವ್ಯಂಗ್ಯವಾಡಿದರು.
'ಇಂತಹ ಘಟನೆಯನ್ನು ಇದುವರೆಗೂ ಕೇಳಿರಲಿಲ್ಲ. ನಾನು ರಾಜ್ಯಸಭೆಗೆ ಹೋಗುವಾಗ ₹500ರ ಒಂದು ನೋಟು ಮಾತ್ರ ಕೊಂಡೊಯ್ಯುತ್ತೇನೆ. ಗುರುವಾರ ಮಧ್ಯಾಹ್ನ 12.57ಕ್ಕೆ ಸದನದ ಒಳಗೆ ಬಂದೆ. 1 ಗಂಟೆಗೆ ಕಲಾಪ ಕೊನೆಗೊಂಡಾಗ ಹೊರಬಂದೆ. ಮಧ್ಯಾಹ್ನ 1.30ರವರೆಗೆ ಕ್ಯಾಂಟೀನ್‌ನಲ್ಲಿ ಇದ್ದು ಆ ಬಳಿಕ ಸಂಸತ್ ಆವರಣದಿಂದ ಹೊರಬಂದೆ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ನಾನು ಸದನದಲ್ಲಿ ಒಟ್ಟು ಮೂರು ನಿಮಿಷ ಹಾಗೂ ಸಂಸತ್ ಅವರಣದಲ್ಲಿ 30 ನಿಮಿಷ ಮಾತ್ರ ಇದ್ದೆ. ಇಂತಹ ವಿಷಯಗಳನ್ನು ರಾಜಕೀಯಗೊಳಿಸುವುದು ವಿಲಕ್ಷಣವಾಗಿ ಕಾಣಿಸುತ್ತದೆ. ಜನರು ಸಂಸತ್ ಒಳಗೆ ಬಂದು ತಮಗೆ ತೋಚಿದಲ್ಲಿ ಏನು ಬೇಕಾದರೂ ಇಡಬಹುದು ಅಂದರೆ ಏನರ್ಥ? ಈ ಬಗ್ಗೆ ತನಿಖೆ ನಡೆಯಬೇಕು' ಎಂದು ಒತ್ತಾಯಿಸಿದ್ದಾರೆ.